ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆಯ ಅಡುಗೆ ಅನಿಲ ಎಲ್‌ಪಿಜಿಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಲು ಸರ್ಕಾರವು ಮೂರು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಿಗೆ 22,000 ಕೋಟಿ ರೂ. ಗಳನ್ನು ಒಂದು ಬಾರಿ ಅನುದಾನವನ್ನು ವಿಸ್ತರಿಸಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಗೆ ಒಂದು ಬಾರಿ ಧನಸಹಾಯ ಮಾಡಲು ಅನುದಾನವನ್ನು ಅನುಮೋದಿಸಿತು ಎಂದು ಠಾಕೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂನ್ 2020 ಮತ್ತು ಜೂನ್ 2022ರ ನಡುವೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಎಲ್‌ಪಿಜಿ ಮಾರಾಟ ಮಾಡಿದ್ದರಿಂದ ಆದ ನಷ್ಟವನ್ನು ತೈಲ ಕಂಪನಿಗಳು ಈ ಅನುದಾನದಿಂದ ಸರಿದೂಗಿಸಲಿವೆ ಎಂದು ಅವರು ಹೇಳಿದ್ದಾರೆ. ಈ ಮೂರು ಕಂಪನಿಗಳು ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ಗ್ರಾಹಕರಿಗೆ ಗೃಹಬಳಕೆ ಅಡುಗೆ ಅನಿಲವನ್ನು ಮಾರಾಟ ಮಾಡುತ್ತಿದ್ದು ಇದರಿಂದ ಕಂಪೆನಿಗೆ ನಷ್ಟವಾಗಿದೆ ಎನ್ನಲಾಗಿದೆ.
ಜೂನ್ 2020 ಮತ್ತು ಜೂನ್ 2022ರ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ದರ ಶೇಕಡ 300ರಷ್ಟು ಹೆಚ್ಚಾಗಿದ್ದರೂ, ಅಂತರರಾಷ್ಟ್ರೀಯ ಬೆಲೆ ವ್ಯತ್ಯಾಸದ ಭಾರವನ್ನು ಗ್ರಾಹಕರ ಮೇಲೆ ಸಂಪೂರ್ಣ ಹೇರದೆ ಶೇಕಡ 72ರಷ್ಟು ಬೆಲೆ ಏರಿಕೆ ಮಾತ್ರ ಮಾಡಲಾಗಿತ್ತು. ಹೀಗಾಗಿ, ಮೂರು ತೈಲ ಕಂಪನಿಗಳು ಗಮನಾರ್ಹ ನಷ್ಟ ಅನುಭವಿಸಿದ್ದವು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.