ನವದೆಹಲಿ: ಒಂಬತ್ತು ದಿನಗಳ ದೀಪಾವಳಿ ರಜೆ ನಂತರ ಸೋಮವಾರದಿಂದ ಪುನರ್ ಆರಂಭವಾಗುವ ಕಲಾಪದಲ್ಲಿ ವಿವಾದಿತ ಪೌರತ್ವ (ತಿದ್ದುಪಡಿ) ಕಾಯ್ದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳು ಸೇರಿದಂತೆ ಸುಮಾರು 240 ಸಾರ್ವಜನಿಕ ಹಿತಾಸಕ್ತಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್ . ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠ ಸಿಎಎಗೆ ಸಂಬಂಧಿಸಿದ 232 ಅರ್ಜಿಗಳನ್ನು ಅಕ್ಟೋಬರ್ 31 ರಂದು ವಿಚಾರಣೆಗೆ ಪಟ್ಟಿ ಮಾಡಿದೆ. ಈ ಹಿಂದೆ ನವೆಂಬರ್ 8ರಂದು ಕಚೇರಿಯಿಂದ ನಿರ್ಗಮಿಸಲಿರುವ ಸಿಜೆಐ ಲಲಿತ್ ನೇತೃತ್ವದ ಪೀಠ, ಸಿಎಎಯನ್ನು ಪ್ರಶ್ನಿಸುವ ಅರ್ಜಿಗಳನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು.
2014 ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದೇಶಕ್ಕೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು 2019 ರ ತಿದ್ದುಪಡಿ ಕಾನೂನು ಜಾರಿಗೆ ಬಂದಿದೆ. ಮುಸ್ಲಿಮರನ್ನು ಹೊರಗಿಡುವ ಬಗ್ಗೆ ವಿರೋಧ ಪಕ್ಷಗಳು, ನಾಯಕರು ಮತ್ತು ಇತರರಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ.
ಈ ವಿಷಯ ಕುರಿತು ಅರ್ಜಿ ಸಲ್ಲಿಸಿರುವುದರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮುಂಚೂಣಿಯಲ್ಲಿದೆ. ಕೇಂದ್ರದ ಮಾತುಗಳನ್ನು ಕೇಳದೆ ಪೌರತ್ವ (ತಿದ್ದುಪಡಿ) ಕಾಯ್ದೆಯ ಕಾರ್ಯಾಚರಣೆಯನ್ನು ತಡೆಹಿಡಿಯುವುದಿಲ್ಲ ಎಂದು ಜನವರಿ 2020 ರಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
ಸಿಎಎಯನ್ನು ಪ್ರಶ್ನಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೋರಿರುವ ಉನ್ನತ ನ್ಯಾಯಾಲಯವು ಈ ವಿಷಯ ಕುರಿತ ಬಾಕಿ ಉಳಿದಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಲ್ಲೂ ನಿರ್ಬಂಧಿಸಿದೆ. ಈ ಕಾಯ್ದೆ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಧರ್ಮದ ಆಧಾರದ ಮೇಲೆ ಹೊರಗಿಡುವ ಮೂಲಕ ಅಕ್ರಮ ವಲಸಿಗರ ಒಂದು ವರ್ಗಕ್ಕೆ ಪೌರತ್ವವನ್ನು ನೀಡಲು ಉದ್ದೇಶಿಸಿದೆ ಎಂದು ಐಯುಎಂಎಲ್ ಹೇಳಿದೆ.