ನವ ದೆಹಲಿ: ಯೂಟ್ಯೂಬ್ ಚಾನೆಲ್ ಒಂದರ ತನ್ನ ನೆಚ್ಚಿನ ಯೂಟ್ಯೂಬರ್ನನ್ನು ಭೇಟಿ ಮಾಡಲೆಂದು ಬಾಲಕನೊಬ್ಬ 250 ಕಿ.ಮೀ ಸೈಕಲ್ ತುಳಿದುಕೊಂಡು ದೆಹಲಿಗೆ ಪ್ರಯಾಣಿಸಿದ್ದಾನೆ.
ಪಂಜಾಬ್ನ ಪಟಿಯಾಲದ 13 ವರ್ಷದ ಬಾಲಕ ಮೂರು ದಿನಗಳ ಕಾಲ ಸೈಕಲ್ ತುಳಿಯುತ್ತಾ ದೆಹಲಿ ತಲುಪಿದ್ದಾನೆ.ಬಾಲಕ ಮನೆಯಿಂದ ಹೊರಹೋಗಿರುವುದು ಪೋಷಕರ ಅರಿವಿಗೆ ಬಂದಿಲ್ಲ. ಹೇಳದೆ ಸೈಕಲ್ ಏರಿ ತನ್ನ ನೆಚ್ಚಿನ ಯೂಟ್ಯೂಬರ್ನನ್ನು ನೋಡಲು ಹೋಗಿದ್ದಾನೆ. ಮಗ ಮನೆಯಲ್ಲಿ ಕಾಣುತ್ತಿಲ್ಲವೆಂದು ಪೋಷಕರು ಹುಡುಕಾಡಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪಂಜಾಬ್ನಿಂದ ದೆಹಲಿಗೆ ಬಂದ ಬಾಲಕ ಯೂಟ್ಯೂಬರ್ ನಿಶ್ಚಯ್ ಮಲ್ಹಾನ್ನನ್ನು ಭೇಟಿ ಮಾಡಲು ಆತನ ಅಪಾರ್ಟ್ಮೆಂಟ್ ತೆರಳಿದ್ದಾನೆ. ಆದರೆ ನಿಶ್ಚಯ್ ಮಲ್ಹಾನ್ ಅಲ್ಲಿರಲಿಲ್ಲ. ಆತ ದುಬೈಗೆ ತೆರಳಿದ್ದ.
ಪೊಲೀಸರು ಸಾಮಾಜಿಕ ಜಾಲತಾಣ ಹಾಗೂ ಸಿಸಿಟಿವಿ ದೃಶ್ಯಗಳ ಸಹಾಯದಿಂದ ಬಾಲಕನನ್ನು ರಕ್ಷಿಸಿದ್ದಾರೆ. ವಿಷಯ ತಿಳಿದ ಯೂಟ್ಯೂಬರ್ ಬಾಲಕನ ಮಾಹಿತಿ ಶೇರ್ ಮಾಡಿ ಜನರಲ್ಲಿ ರಕ್ಷಿಸಲು ಮನವಿ ಸಲ್ಲಿಸಿದ್ದರು.
ಯೂಟ್ಯೂಬರ್ ಪೀತಾಂಪುರ ಪ್ರದೇಶದಲ್ಲಿ ನೆಲೆಸಿರುವುದನ್ನು ದೆಹಲಿ ಪೊಲೀಸರು ಮೊದಲು ಪತ್ತೆ ಹಚ್ಚಿದ್ದಾರೆ. ನಂತರ ಅಲ್ಲಿನ ನೆರೆಯ ನಿವಾಸಿಗಳ ಸಹಾಯ ಪಡೆದುಕೊಂಡು ಬಾಲಕ ಪಂಜಾಬ್ನಿಂದ ಬರುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಪರಿಶೀಲಿಸಿದಾಗ ಯೂಟ್ಯೂಬರ್ ವಿದೇಶಕ್ಕೆ ತೆರಳಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಬಾಲಕನನ್ನು ಪಾರ್ಕ್ ಒಂದರಲ್ಲಿ ಪೊಲೀಸರು ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ಪೋಷಕರು ಬಂದು ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.