ನವದೆಹಲಿ: 'ಭಾರತೀಯ ನೌಕಾಪಡೆಯ ಮಿಗ್- 29ಕೆ ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದ ಬುಧವಾರ ಬೆಳಿಗ್ಗೆ ಗೋವಾದ ಕರಾವಳಿ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಪೈಲಟ್ ಹೊರಗೆ ಜಿಗಿದು ಪಾರಾಗಿದ್ದಾರೆ' ಎಂದು ನೌಕಾಪಡೆ ತಿಳಿಸಿದೆ.
'ಗೋವಾ ಸಮುದ್ರದ ಮೇಲೆ ದಿನನಿತ್ಯದ ಹಾರಾಟದಲ್ಲಿ ತೊಡಗಿದ್ದ ಮಿಗ್- 29ಕೆ ಯುದ್ಧ ವಿಮಾನ ಹಿಂತಿರುಗುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಸಮುದ್ರದಲ್ಲಿ ತೇಲುತ್ತಿದ್ದ ಪೈಲಟ್ ಅವರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಯಿತು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ' ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯ ಕುರಿತಂತೆ ತನಿಖೆ ನಡೆಸುವಂತೆ ತನಿಖಾ ಮಂಡಳಿಗೆ (ಬಿಒಐ) ನೌಕಾಪಡೆಯ ಪ್ರಧಾನ ಕಚೇರಿ ಆದೇಶಿಸಿದೆ.
ಗೋವಾ ಸಮುದ್ರ ತೀರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು ಮೂರು ಮಿಗ್ ವಿಮಾನಗಳು ಪತನಗೊಂಡಿದ್ದು, ಎಲ್ಲಾ ಪ್ರಕರಣಗಳಲ್ಲೂ ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದರು.