ನವದೆಹಲಿ: ಮೂರರಿಂದ ಎಂಟು ವರ್ಷದ ಮಕ್ಕಳ ಅಡಿಪಾಯ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ (ಎನ್ಸಿಎಫ್) ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಚಾಲನೆ ನೀಡಿದರು. 'ಹೊಸ ಶಿಕ್ಷಣ ನೀತಿ -2020 ಅನುಷ್ಠಾನಕ್ಕೆ ಎನ್ಸಿಎಫ್ ಪ್ರಮುಖ ಹೆಜ್ಜೆಯಾಗಿದೆ.
ಹೊಸ ಪಠ್ಯಕ್ರಮವು ಮಕ್ಕಳ ಸಮಗ್ರ ಅಭಿವೃದ್ಧಿ ಮತ್ತು ಕೌಶಲಕ್ಕೆ ಒತ್ತು ನೀಡುತ್ತದೆ ಎಂದು ಪ್ರಧಾನ್ ಹೇಳಿದ್ದಾರೆ. ಎನ್ಸಿಎಫ್ -2022 ನಾಲ್ಕು ವಿಭಾಗಗಳನ್ನು ಹೊಂದಿದೆ. ಅವುಗಳೆಂದರೆ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು, ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಮತ್ತು ವಯಸ್ಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು.
ಪಂಚಕೋಶ ಪರಿಕಲ್ಪನೆ:ಮಗುವಿನ ಜೀವನದ ಮೊದಲ 8 ವರ್ಷಗಳಲ್ಲಿ ಮಿದುಳಿನ ಬೆಳವಣಿಗೆಯು ಅತ್ಯಂತ ವೇಗವಾಗಿರುತ್ತದೆ. ಹಾಗಾಗಿ ಎನ್ಸಿಎಫ್ನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ 'ಪಂಚಕೋಶ' ಪರಿಕಲ್ಪನೆಯನ್ನು ಪಟ್ಟಿ ಮಾಡಲಾಗಿದೆ. ಅವುಗಳೆಂದರೆ ದೈಹಿಕ ಬೆಳವಣಿಗೆ (ಶರೀರಿಕ್ ವಿಕಾಸ್), ಜೀವಶಕ್ತಿಯ ಅಭಿವೃದ್ಧಿ (ಪ್ರಾಣಿಕ್ ವಿಕಾಸ್), ಭಾವನಾತ್ಮಕ ಮತ್ತು ಮಾನಸಿಕ ಅಭಿವೃದ್ಧಿ (ಮಾನಸಿಕ್ ವಿಕಾಸ್), ಬೌದ್ಧಿಕ ಬೆಳವಣಿಗೆ (ಬೌದ್ಧಿಕ್ ವಿಕಾಸ್), ಆಧ್ಯಾತ್ಮಿಕ ಬೆಳವಣಿಗೆ (ಚೈತ್ರಿಕ್ ವಿಕಾಸ್). ಇವುಗಳ ಆಧಾರದಡಿ ಮಕ್ಕಳನ್ನು ತಯಾರು ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ವಿದ್ಯಾಪ್ರವೇಶ್: ಒಂದನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗಾಗಿ ಎನ್ಸಿಇಆರ್ಟಿ 'ವಿದ್ಯಾ ಪ್ರವೇಶ್' ಕಾರ್ಯಕ್ರಮ ಆರಂಭಿಸಿದೆ. ದಿನಕ್ಕೆ 4 ಗಂಟೆಯಂತೆ 3 ತಿಂಗಳ ಕಾಲ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಮಕ್ಕಳು ಶಾಲಾ ಪರಿಸರಕ್ಕೆ ಹೊಂದಿ ಕೊಳ್ಳಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ರಮ ಆರಂಭಿಸಿದೆ ಎಂದು ಎನ್ಸಿಎಫ್ ಹೇಳಿದೆ.
ಕರಡು ಸಿದ್ಧತೆ ಆಗಿದ್ದು ಹೇಗೆ? ಎನ್ಸಿಆರ್ಎಫ್ ಕರಡನ್ನು ಯುಜಿಸಿ, ಎಐಸಿಟಿಇ, ಎನ್ ಸಿವಿಇಟಿ, ಎನ್ಐಒಎಸ್, ಸಿಬಿಎಸ್ಇ, ಎನ್ಸಿಇಆರ್ಟಇ, ಶಿಕ್ಷಣ ಸಚಿವಾಲಯ, ಡಿಜಿಟಿ ಮತ್ತು ಕೌಶಲ ಅಭಿವೃದ್ಧಿ ಸಚಿವಾಲಯದ ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಿದೆ.
ನ್ಯಾಷನಲ್ ಕ್ರೆಡಿಟ್ ಫ್ರೇಮ್ರ್ಕ್: ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ವೃತ್ತಿಪರ ಮತ್ತು ಕೌಶಲ ಶಿಕ್ಷಣದ ಮೂಲಕ ಗಳಿಸಿದ ಕ್ರೆಡಿಟ್ಗಳನ್ನು ಸಂಯೋಜಿಸುವ ಮೊದಲ 'ನ್ಯಾಷನಲ್ ಕ್ರೆಡಿಟ್ ಫ್ರೇಮ್ರ್ಕ್' (ಎನ್ಸಿಆರ್ಎಫ್) ಕರಡನ್ನು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಸಂಬಂಧ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಕೋರಿದೆ.
ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳನ್ನು ಸಂಯೋಜಿಸಲಿರುವ ಎನ್ಸಿಆರ್ಎಫ್ ಶಿಕ್ಷಣ ಕ್ಷೇತ್ರದಲ್ಲಿ ಗೇಮ್ ಚೇಂಚರ್ ಆಗಿ ಕೆಲಸ ಮಾಡಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಹೇಳಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಗೆ ಮತ್ತು ಉನ್ನತ ಶಿಕ್ಷಣದ ಅಂತರ್ ಮಿಶ್ರಣಕ್ಕೆ ಹಲವು ಆಯ್ಕೆಗಳನ್ನು ಎನ್ಸಿಆರ್ಎಫ್ ತೆರೆಯಲಿದ್ದು, ಕೌಶಲ ಮತ್ತು ವೃತ್ತಿಪರ ಶಿಕ್ಷಣವನ್ನು ಮುಖ್ಯವಾಹಿನಿಗೆ ತರಲಿದೆ. ಮುಖ್ಯವಾಹಿನಿಯ ಶಿಕ್ಷಣದಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಶಿಕ್ಷಣ ಪರಿಸರ ವ್ಯವಸ್ಥೆಗೆ ಮರುಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ
ಇದೇ ಮೊದಲು: ತಾಂತ್ರಿಕ ಮತ್ತು ಉನ್ನತ ಶಿಕ್ಷಣದಲ್ಲಿ ಕ್ರೆಡಿಟ್ ಆಧರಿತ ಚೌಕಟ್ಟು ಈಗಾಗಲೇ ಜಾರಿಯಲ್ಲಿದ್ದರೂ ಶಾಲೆ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಸೇರಿಸಿರುವುದು ಇದೇ ಮೊದಲು. ಎನ್ಸಿಆರ್ಎಫ್ ಎಲ್ಲ ಆಯಾಮಗಳಲ್ಲಿ ಕಲಿಕೆಯನ್ನು ಏಕೀಕರಿಸುವ ಗುರಿ ಹೊಂದಿದೆ. ಅಂದರೆ ಶೈಕ್ಷಣಿಕ, ವೃತ್ತಿಪರ ಕೌಶಲಗಳು ಮತ್ತು ಅನುಭವದ ಕಲಿಕೆಯನ್ನು ಒಳಗೊಂಡಿರುತ್ತದೆ. ಮುಂದಿನ 2-3 ವರ್ಷಗಳಲ್ಲಿ 100% ಸಾಕ್ಷರತೆ ಸಾಧಿಸಲು ಜ್ಞಾನ ಸಂಪಾದನೆ, ಪ್ರಾಯೋಗಿಕ ತರಬೇತಿ ಮತ್ತು ಸಕಾರಾತ್ಮಕ ಸಾಮಾಜಿಕ ಫಲಿತಾಂಶಗಳಿಗೆ ಕ್ರೆಡಿಟ್ಗಳು ಪ್ರಮುಖ ಹೆಜ್ಜೆಯಾಗುತ್ತವೆ ಎಂದು ಪ್ರಧಾನ್ ಹೇಳಿದ್ದಾರೆ.
ಕ್ರೆಡಿಟ್ ಗಳಿಕೆ ಹೇಗೆ?
ಕರಡು ಪ್ರಕಾರ,
5ನೇ ತರಗತಿಯಿಂದ ಪಿಎಚ್ಡಿ ಹಂತದವರೆಗಿನ ಕಲಿಕೆಯ ಸಮಯದ ಆಧಾರದ ಮೇಲೆ ಕ್ರೆಡಿಟ್
ನಿಗದಿಪಡಿಸಲಾಗುತ್ತದೆ. ಎನ್ಸಿಆರ್ಎಫ್ ಅಡಿ ಪ್ರತಿಯೊಂದು ಕಲಿಕೆಯನ್ನು
ಮೌಲ್ಯಮಾಪನಕ್ಕೆ ಒಳಪಡಿಸಿ ಕ್ರೆಡಿಟ್ ಪಡೆಯಬಹುದು. ತರಗತಿ ಬೋಧನೆ-ಕಲಿಕೆ, ಪ್ರಯೋಗಾಲಯ
ಕೆಲಸ, ನಾವೀನ್ಯತೆ ಲ್ಯಾಬ್ಗಳು, ಕ್ರೀಡೆ ಮತ್ತು ಆಟಗಳು, ಯೋಗ , ದೈಹಿಕ ಚಟುವಟಿಕೆಗಳು,
ಪ್ರದರ್ಶನ ಕಲೆಗಳು, ಸಂಗೀತ, ಕರಕುಶಲ ಕೆಲಸ, ಸಾಮಾಜಿಕ ಕೆಲಸ, ಎನ್ಸಿಸಿ, ಬ್ಯಾಗ್
ಕಡಿಮೆ ದಿನಗಳು, ಪರೀಕ್ಷೆಗಳು, ಕ್ಲಾಸ್ ಟೆಸ್ಟ್, ತರಬೇತಿ ಮತ್ತು ಕೌಶಲ, ಕೌಶಲ
ಶಿಕ್ಷಣದಲ್ಲಿ ಕ್ಷೇತ್ರ ಭೇಟಿ, ಉದ್ಯೋಗ ತರಬೇತಿ, ಇಂಟರ್ನ್ಶಿಪ್/ಅಪ್ರೆಂಟಿಸ್ಶಿಪ್ ,
ಅನುಭವದ ಕಲಿಕೆ ಮೂಲಕ ಕ್ರೆಡಿಟ್ ಗಳಿಸಬಹುದಾಗಿದೆ.
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ)
ಎನ್ಸಿಆರ್ಎಫ್
ಅನ್ನು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ) ಮೂಲಕ
ಕಾರ್ಯಗತಗೊಳಿಸಲಾಗುತ್ತದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ಕಳೆದ ವರ್ಷ ಉನ್ನತ
ಶಿಕ್ಷಣಕ್ಕಾಗಿ ಎಸಿಬಿಯನ್ನು ಪ್ರಾರಂಭಿಸಿತ್ತು. ಮಾನ್ಯತೆ ಪಡೆದ ಸಂಸ್ಥೆಗಳಿಂದ ಗಳಿಸಿದ
ಶೈಕ್ಷಣಿಕ ಮತ್ತು ಇತರೆ ಕ್ರೆಡಿಟ್ಗಳನ್ನು ಎಬಿಸಿ ಡಿಜಿಟಲ್ ರೂಪದಲ್ಲಿ
ಸಂಗ್ರಹಿಸುತ್ತದೆ. ಸುಲಭ ಪರಿಶೀಲನೆ ಮತ್ತು ಪೋರ್ಟಬಿಲಿಟಿಗಾಗಿ ಕ್ರೆಡಿಟ್ಗಳನ್ನು ಡಿಜಿ
ಲಾಕರ್ಗೆ ಲಿಂಕ್ ಮಾಡಬಹುದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)2020ರ
ಅನುಷ್ಠಾನದ ಭಾಗವಾಗಿ ಎನ್ಸಿಆರ್ಎಫ್ ಪ್ರಾರಂಭಿಸಲಾಗುತ್ತಿದೆ.