ನವದೆಹಲಿ: ಎರಡು ದಿನಗಳ ಹಿಂದಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರ ಹೆಚ್ಚಿಸಿದ ಪರಿಣಾಮ ಸಾಲದ ಕಂತುಗಳ ಮೊತ್ತ ಹೆಚ್ಚಾಗಿದೆ. ಇದು ಇಷ್ಟಕ್ಕೆ ನಿಲ್ಲದು. ಡಿಸೆಂಬರ್ನಲ್ಲಿ ಮತ್ತೊಂದು ಶಾಕ್ಗೆ ಸಜ್ಜಾಗಿ ಎನ್ನುತ್ತಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿ.
ರೆಪೊ ದರ ಡಿಸೆಂಬರ್ನಲ್ಲಿ 35 ಮೂಲಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಸ್ಬಿಐ ಅಂದಾಜಿಸಿದೆ. ಸಾಲದ ಮೇಲಿನ ಬಡ್ಡಿ ದರ 50 ಮೂಲಾಂಶ ಹೆಚ್ಚಳ ಪರಿಣಾಮ ಪ್ರಸ್ತುತ ರೆಪೊ ದರ ಶೇ.5.90ಕ್ಕೆ ಏರಿಕೆಯಾಗಿದೆ.
ಕಳೆದ ಮೇ ತಿಂಗಳಿಂದ ರೆಪೊ ದರ 5 ಬಾರಿ ಪರಿಷ್ಕರಣೆ ಆಗಿರುವ ಕಾರಣ ಪ್ರಸಕ್ತ ಆರ್ಥಿಕ ಸಾಲಿನ ಪ್ರಥಮ ತ್ರೖೆಮಾಸಿಕದಲ್ಲಿ ಹೊಸ ಯೋಜನೆಗಳ ಘೋಷಣೆ ಕಡಿಮೆ ಆಗಿತ್ತು. 2021-22ನೇ ಸಾಲಿನ ಕಡೆಯ ತ್ರೖೆಮಾಸಿಕದಲ್ಲಿ 5.75 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳು ನಡೆದಿದ್ದವು. ಆದರೆ, ಈಗ 4.35 ಲಕ್ಷ ಕೋಟಿ ರೂ. ಯೋಜನೆಗಳು ಮಾತ್ರ ಚಾಲ್ತಿಯಲ್ಲಿವೆ. ಈ ಬೆಳವಣಿಗೆಗೆ ಏರುತ್ತಿರುವ ಹಣದುಬ್ಬರವೇ ಕಾರಣ ಎಂದು ಎಸ್ಬಿಐ ಇಕೋರ್ಯಾಪ್ ವರದಿ ತಿಳಿಸಿದೆ.
ಹಣದುಬ್ಬರ ಶೇ. 5.2ಕ್ಕೆ ಇಳಿಕೆ: ಇನ್ನೊಂದೆಡೆ, ಕೊಂಚ ಆಶಾದಾಯಕ ಸಂಗತಿ ಎಂದರೆ 2023ರ ಏಪ್ರಿಲ್ನಿಂದ ಪ್ರಾರಂಭವಾಗುವ ಮುಂದಿನ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಶೇ.5.2ಕ್ಕೆ ಇಳಿಯಲಿದೆ ಎಂದು ಆರ್ಬಿಐ ಅಂದಾಜಿಸಿದೆ. ಮಳೆ, ಜಾಗತಿಕ ಪೂರೈಕೆ ಸರಪಳಿಗಳು ಮತ್ತಷ್ಟು ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನೆಲೆ ಚಿಲ್ಲರೆ ಹಣದುಬ್ಬರ ದರ ಕಡಿಮೆಯಾಗಲಿದೆ ಆದರೆ, ಈ ವರ್ಷದ ಅಕ್ಟೋಬರ್ ತ್ರೖೆಮಾಸಿಕದಲ್ಲಿ ಹಣದುಬ್ಬರ ಪ್ರಮಾಣ ಶೇ.6.7ರಷ್ಟು ಇರಲಿದೆ ಎಂದು ಆರ್ಬಿಐ ವಿತ್ತೀಯ ನೀತಿ ವರದಿಯಲ್ಲಿ ತಿಳಿಸಿದೆ. ಚಿಲ್ಲರೆ ಹಣದುಬ್ಬರವನ್ನು ಶೇ.2-6ರ ವ್ಯಾಪ್ತಿಯಲ್ಲಿ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದರೂ, ಆರ್ಬಿಐಗೆ ಇದು ಸಾಧ್ಯವಾಗಿಲ್ಲ. ಆದಾಗ್ಯೂ ರಷ್ಯಾ-ಯೂಕ್ರೇನ್ ಯುದ್ಧದಿಂದ ಉದ್ಭವಿಸಿದ ಉದ್ವಿಗ್ನತೆಯಿಂದ ಪೂರೈಕೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದ್ದರಿಂದ 2022ರ ಜನವರಿಯಿಂದ ಚಿಲ್ಲರೆ ಹಣದುಬ್ಬರವು ಆರ್ಬಿಐ ಅಂದಾಜಿಸಿಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಯುತ್ತಿದೆ.
80 ಡಾಲರ್ಗಿಳಿದ ಕಚ್ಚಾ ತೈಲ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಮುಖದ ಹಾದಿಯಲ್ಲಿ ಸಾಗಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ದರ 1.62 ಡಾಲರ್ನಷ್ಟು ಇಳಿಕೆಯಾಗಿ 85.56 ರಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ ವೆಸ್ಟ್ ಟೆಕ್ಸಾಸ್ ಇಂಟರ್ವಿುೕಡಿಯೇಟ್ (ಡಬ್ಲುಟಿಐ) ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್ಗೆ ಶೇ.1.83ರಷ್ಟು ಇಳಿಕೆಯಾಗಿ, 80 ಡಾಲರ್ಗಿಂತಲೂ ಕೆಳಗೆ ಬಂದಿದೆ. ಅಂದರೆ ಪ್ರತಿ ಬ್ಯಾರೆಲ್ಗೆ 79.74 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ವಿಂಡ್ಫಾಲ್ ತೆರಿಗೆ ಇಳಿಕೆ: ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್ಫಾಲ್ ತೆರಿಗೆಯನ್ನು ಕೇಂದ್ರ ಸರ್ಕಾರವು ಪ್ರತಿ ಟನ್ಗೆ 10,500 ರೂ.ನಿಂದ 8 ಸಾವಿರ ರೂ.ಗೆ ಇಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಆಗಿದ್ದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ಆಗಿರುವ ನಷ್ಟಗಳನ್ನು ತೈಲ ಕಂಪನಿಗಳು ಈಗ ತುಂಬಿಕೊಳ್ಳುತ್ತಿವೆ. ಜತೆಗೆ ರೂಪಾಯಿ ಮೌಲ್ಯ ಕುಸಿತದಿಂದಾಗಿ ಭಾರತಕ್ಕೆ ಕಚ್ಚಾತೈಲ ಆಮದು ದುಬಾರಿಯಾಗಿದೆ.