ಲಂಡನ್: ಅಮೆರಿಕ ನೇತೃತ್ವದ ನ್ಯಾಟೊ ಮಿಲಿಟರಿ ಪಡೆಗೆ ಸೇರ್ಪಡೆಗೊಳ್ಳಲು ಯೂಕ್ರೇನ್ ಒಪ್ಪಿಕೊಂಡರೆ ಮೂರನೇ ಮಹಾಯುದ್ಧ ನಡೆಯುವುದು ಖಚಿತ ಎಂದು ರಷ್ಯಾ ಎಚ್ಚರಿಕೆ ನೀಡಿದೆ. ರಷ್ಯಾ ಅಧ್ಯಕ್ಷ ಪುತಿನ್ ಸೆಪ್ಟೆಂಬರ್ 30ರಂದು ಯೂಕ್ರೇನ್ನ ಶೇ. 18ರಷ್ಟು ಭೂಭಾಗವನ್ನು ಸ್ವಾಧೀನಪಡಿಸಿಕೊಳ್ಳ ಲಾಗಿದೆ ಎಂದು ಔಪಚಾರಿಕವಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನ್ಯಾಟೊದ ತ್ವರಿತ ಸದಸ್ಯತ್ವಕ್ಕಾಗಿ ಅಚ್ಚರಿಯ ಬಿಡ್ ಸಲ್ಲಿಸಿದ್ದರು.
'ಸದಸ್ಯತ್ವ ಪಡೆಯುವ ಕ್ರಮವು ಮೂರನೇ ಮಹಾಯುದ್ಧಕ್ಕೆ ಕಾರಣವಾಗುತ್ತದೆ ಎಂಬುದನ್ನು ಕೈವ್ ತಿಳಿದುಕೊಳ್ಳಬೇಕು' ಎಂದು ರಷ್ಯಾದ ಭದ್ರತಾ ಮಂಡಳಿಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನೆಡಿಕೋವ್ ಹೇಳಿದ್ದಾರೆ.
ಈ ನಡುವೆ ಯೂಕ್ರೇನ್ನ ರಾಜಧಾನಿ ಕಿಯೆವ್ ನಗರದ ಸುತ್ತಮುತ್ತ ರಷ್ಯಾ ಗುರುವಾರ ಇರಾನ್ ನಿರ್ವಿುತ ಕಾಮಿಕೇಜ್ ಡ್ರೋನ್ ದಾಳಿ ನಡೆಸಿದೆ. ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಕೈವ್ ಪ್ರಾದೇಶಿಕ ಗವರ್ನರ್ ಒಲೆಕ್ಸಿ ಕುಲೆಬಾ ಹೇಳಿದ್ದಾರೆ. ದಕ್ಷಿಣ ನಗರವಾದ ಮೈಕೊಲೈವ್ನಲ್ಲಿ ಬುಧವಾರ ರಾತ್ರಿ ನಡೆದ ಶೆಲ್ ದಾಳಿಯಲ್ಲಿ ಐದು ಅಂತಸ್ತಿನ ಅಪಾರ್ಟ್ವೆುಂಟ್ ಕಟ್ಟಡ ನಾಶಗೊಂಡಿದೆ. ಸೋಮವಾರ ಕನಿಷ್ಠ ನಾಲ್ಕು ಬಾರಿ ದಾಳಿ ನಡೆಸಿದ್ದರಿಂದ 19 ಜನರು ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ನ್ಯಾಟೊ ಮಹತ್ವದ ಸಭೆ
ನ್ಯಾಟೊದ ರಹಸ್ಯ ಪರಮಾಣು ಯೋಜನಾ ಸಮಿತಿ ಗುರುವಾರ ಸಭೆ ಸೇರಿ ಮಹತ್ವದ ಮಾತುಕತೆ ನಡೆಸಿದೆ. ಬ್ರುಸೆಲ್ಸ್ನಲ್ಲಿರುವ ನ್ಯಾಟೊ ಪ್ರಧಾನಕಚೇರಿಯಲ್ಲಿ ಈ ಮಾತುಕತೆ ನಡೆದಿದ್ದು, ಮೈತ್ರಿಒಕ್ಕೂಟದ ರಕ್ಷಣಾ ಸಚಿವರು ಅಧ್ಯಕ್ಷತೆ ವಹಿಸಿದ್ದರು. ಸಾಮಾನ್ಯವಾಗಿ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಈ ಸಭೆ ನಡೆಯುತ್ತದೆ. ರಷ್ಯಾವು ಯೂಕ್ರೇನ್ ಮೇಲೆ ಕ್ಷಿಪಣಿ, ಆತ್ಮಾಹುತಿ ಡ್ರೋನ್ ಹಾಗೂ ಬಾಂಬ್ಗಳ ಸುರಿಮಳೆ ನಡೆಸುತ್ತಿರುವುದರಿಂದ ಯೂಕ್ರೇನ್ನ ವಾಯು ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಯೂಕ್ರೇನ್ ಜನರ ರಕ್ಷಣೆಗೆ ಬೆಂಬಲ ನೀಡಲಾಗುವುದು ಎಂದು ನ್ಯಾಟೊ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ ಬರ್ಗ್ ಬುಧವಾರ ಘೋಷಿಸಿದ್ದರು. ಇದರ ಜತೆಗೆ ಅಮೆರಿಕ ನೇತೃತ್ವದ ಕೆಲ ನ್ಯಾಟೊ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ಮೈಮಾನಿಕ ದಾಳಿ ನಡೆಸಲು ಯೂಕ್ರೇನ್ಗೆ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಾಮಾಗ್ರಿಗಳನ್ನು ಪೂರೈಕೆ ಮಾಡಿವೆ. ಇದರ ಜತೆಗೆ ರಷ್ಯಾದ ಚಲನವಲನಗಳ ಮೇಲೂ ನ್ಯಾಟೊ ಕಣ್ಣಿಟ್ಟಿದೆ.
ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ
ರಷ್ಯಾದ ಅಕ್ರಮ ಜನಾಭಿಪ್ರಾಯ ಮತ್ತು ಯೂಕ್ರೇನ್ನ 4 ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ಗಳನ್ನು ಖಂಡಿಸುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಕರಡು ನಿರ್ಣಯದಿಂದ ಭಾರತ ಮತ್ತೆ ದೂರ ಉಳಿದಿದೆ. 193 ಸದಸ್ಯ ದೇಶಗಳ ಪೈಕಿ 143 ದೇಶಗಳು ವಿಶ್ವಸಂಸ್ಥೆ ನಿರ್ಣಯದ ಪರವಾಗಿ, ರಷ್ಯಾ, ಬೆಲಾರಸ್, ಉತ್ತರ ಕೊರಿಯಾ, ಸಿರಿಯಾ ಮತ್ತು ನಿಕರಾಗುವಾ ದೇಶಗಳು ವಿರುದ್ಧವಾಗಿ ಮತ ಚಲಾಯಿಸಿ ದರೆ, ಭಾರತ , ಚೀನಾ, ಕ್ಯೂಬಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಸೇರಿದಂತೆ 35 ದೇಶಗಳು ಮತದಾನದಿಂದ ದೂರ ಉಳಿದಿವೆ. ಆದಾಗ್ಯೂ ರಷ್ಯಾದ ಪ್ರತ್ಯೇಕತೆಯನ್ನು ಎತ್ತಿ ತೋರಿಸಲು ಅಗತ್ಯವಿರುವ 3ನೇ ಎರಡರಷ್ಟು ಬಹುಮತದೊಂದಿಗೆ ನಿರ್ಣಯ ಅಂಗೀಕಾರವಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಭಾರತದ ನಿರ್ಧಾರವನ್ನು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. 'ಸಂವಾದ ಮತ್ತು ರಾಜತಾಂತ್ರಿಕವಾಗಿ ಶಾಂತಿಯುತ ಪರಿಹಾರಕ್ಕೆ ಶ್ರಮಿಸುವ ದೃಢ ಸಂಕಲ್ಪದೊಂದಿಗೆ ಭಾರತವು ವಿಶ್ವಸಂಸ್ಥೆಯ ನಿರ್ಧಾರದಿಂದ ದೂರ ಉಳಿಯಲು ನಿರ್ಧರಿಸಿದೆ ಎಂದು ಹೇಳಿದರು.
ಪರಮಾಣು ಸಮರಾಭ್ಯಾಸ
ನ್ಯಾಟೊ ಮುಂದಿನ ವಾರದಿಂದ ವಾರ್ಷಿಕ ಪರಮಾಣು ಸಮರಾಭ್ಯಾಸ ನಡೆಸಲಿದೆ. ಸ್ಟೆಡ್ಫಾಸ್ಟ್ ನೂನ್ ಹೆಸರಿನಲ್ಲಿ ಒಂದು ವಾರ ಕಾಲ ನಡೆಸಲಾಗುವ ಈ ಅಭ್ಯಾಸದಲ್ಲಿ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಫೈಟರ್ ಜೆಟ್ಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಆದರೆ ಯಾವುದೇ ಸಜೀವ ಬಾಂಬ್ಗಳನ್ನು ಬಳಸುವುದಿಲ್ಲ. ಸಾಂಪ್ರದಾಯಿಕ ಜೆಟ್ಗಳು, ಕಣ್ಗಾವಲು ಮತ್ತು ಇಂಧನ ಭರ್ತಿ ಮಾಡುವ ವಿಮಾನಗಳು ವಾಡಿಕೆಯಂತೆ ಈ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತವೆ. ಹದಿನಾಲ್ಕು ನ್ಯಾಟೊ ಸದಸ್ಯ ರಾಷ್ಟ್ರಗಳು ಈ ಸಮರಾಭ್ಯಾಸದಲ್ಲಿ ಭಾಗಿಯಾಗುತ್ತಿವೆ. ಯೂಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವ ಮುನ್ನವೇ ಈ ಸಮರಾಭ್ಯಾಸ ನಡೆಸಲು ಯೋಜಿಸಲಾಗಿತ್ತು.