ಮುಂಬೈ: ಎಚ್ ಸಿಎಲ್ ಸಂಸ್ಥಾಪಕ ಶಿವ ನಾಡಾರ್ ವಾರ್ಷಿಕ 1,161 ಕೋಟಿ ರೂ. ದಾನ ಮಾಡುವ ಮೂಲಕ ದೇಶದ ಅತ್ಯಂತ ಉದಾರಿ ಉದ್ಯಮಿಯಾಗಿದ್ದಾರೆ ಎಂದು ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2022 ಗುರುವಾರ ತಿಳಿಸಿದೆ.
ವರದಿ ಪ್ರಕಾರ ಪ್ರತಿದಿನ ರೂ.3 ಕೋಟಿ ದಾನ ಮಾಡುವ ಮೂಲಕ 77 ವರ್ಷದ ನಾಡಾರ್ ದೇಶದ ಅತ್ಯಂತ ಉದಾರಿ ಬಿರುದಿಗೆ ಪಾತ್ರರಾಗಿದ್ದಾರೆ. ವಿಪ್ರೋ ಸಂಸ್ಥೆಯ ಅಜಿಂ ಪ್ರೇಮ್ ಜಿ ವಾರ್ಷಿಕವಾಗಿ ರೂ. 484 ಕೋಟಿ ದಾನ ನೀಡುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದೆರಡು ವರ್ಷ ಅವರು ಅಗ್ರಸ್ಥಾನದಲ್ಲಿದ್ದರು.
ದೇಶದ ಅತ್ಯಂತ ಶ್ರೀಮಂತ ಗೌತಮ್ ಅದಾನಿ ರೂ. 190 ಕೋಟಿ ದೇಣಿಗೆ ನೀಡುವ ಮೂಲಕ ಪಟ್ಟಿಯಲ್ಲಿ ಏಳನೇ ಸ್ಛಾನದಲ್ಲಿದ್ದಾರೆ. ಲಾರ್ಸೆನ್ ಅಂಡ್ ಟೂಬ್ರೊದ ಗ್ರೂಪ್ ಚೇರ್ಮನ್ ಎ ಎಂ ನಾಯಕ್ (80) 142 ಕೋಟಿ ದಾನ ನೀಡುವ ಮೂಲಕ ದೇಶದ ಅತ್ಯಂತ ಉದಾರಿ ವೃತ್ತಿಪರ ಮ್ಯಾನೇಜರ್ ಎಂದು ವರದಿ ಹೇಳಿದೆ. ಝೆರೋಧಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ತಮ್ಮ ದೇಣಿಗೆಯನ್ನು ಶೇ. 100 ರಿಂದ ಶೇ. 300ಕ್ಕೆ ಹೆಚ್ಚಿಸಿದ್ದಾರೆ.
ಮೈಂಡ್‌ಟ್ರೀಯ ಸಹ-ಸಂಸ್ಥಾಪಕರಾದ ಸುಬ್ರೊಟೊ ಬಾಗ್ಚಿ ಮತ್ತು ಎನ್‌ಎಸ್ ಪಾರ್ಥಸಾರಥಿ ಅವರು ತಲಾ 213 ಕೋಟಿ ರೂ. ದೇಣಿಗೆಯೊಂದಿಗೆ ಎಡೆಲ್‌ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2022 ರ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ. ಕ್ವೆಸ್ ಕಾರ್ಪ್ ಅಧ್ಯಕ್ಷ ಅಜಿತ್ ಐಸಾಕ್ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ 105 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದ್ದಾರೆ.
ಇನ್ಫೋಸಿಸ್ ನ ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ಎಸ್ ಡಿ ಶಿಬುಲಾಲ್ ಅವರು ಕ್ರಮವಾಗಿ 159 ಕೋಟಿ ರೂ., 90 ಕೋಟಿ ಮತ್ತು 35 ಕೋಟಿ ರೂ. ದಾನ ಮಾಡುವ ಮೂಲಕ 9, 16 ಮತ್ತು 28ನೇ ಸ್ಥಾನದಲ್ಲಿದ್ದಾರೆ.