ಕೋಝಿಕ್ಕೋಡ್: ಪ್ರತಿಷ್ಠಿತ ಶಾಲೆಗಳ ಪೈಕಿ ಒಂದಾದ ನಡಕ್ಕಾವ್ ಸರಕಾರಿ ಗರ್ಲ್ಸ್ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಮತ್ತೊಂದು ಮಾನ್ಯತೆ ಪಡೆದಿದ್ದು, ದೇಶದ ಅತ್ಯುತ್ತಮ ಸರಕಾರಿ ಶಾಲೆಗಳ ರ್ಯಾಂಕ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ ದೇಶದ ಗಮನ ಸೆಳೆದಿದೆ.
ಮುಂಬೈ ಮೂಲದ ಎಜುಕೇಶನ್ ವರ್ಲ್ಡ್ ಇಂಡಿಯಾ ಸ್ಕೂಲ್ ರ್ಯಾಕಿಂಗ್ಸ್ (ಇಡಬ್ಲ್ಯುಐಎಸ್‌ಆರ್) ಎನ್ನುವ ಸರಕಾರಿ ಮಾನ್ಯತೆ ಪಡೆದ ಸಂಸ್ಥೆ ದೇಶದ 300 ನಗರಗಳಲ್ಲಿ ಸಮೀಕ್ಷೆ ನಡೆಸಿ ಅತ್ಯುತ್ತಮ ಸರಕಾರಿ ಶಾಲೆಗಳನ್ನು ಘೋಷಣೆ ಮಾಡಿದೆ.
4,000 ಶಾಲೆಗಳಿಗೆ ಭೇಟಿ ನೀಡಿ ರ್ಯಾಂಕ್ ಪಟ್ಟಿ ಸಿದ್ಧಪಡಿಸಲಾಗಿದೆ. 15 ಶಾಲೆಗಳ ರ್ಯಾಂಕಿಂಗ್‌ನಲ್ಲಿ ನಡಕ್ಕಾವ್ ಶಾಲೆ ದಕ್ಷಿಣ ಭಾರತದ ಏಕೈಕ ಶಾಲೆ. ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿ ದಿಲ್ಲಿಯ ಎರಡು ಶಾಲೆಗಳಿವೆ. ದಿಲ್ಲಿ ದ್ವಾರಕಾದ ಸೆಕ್ಟರ್ 10ರಲ್ಲಿ ಮತ್ತು ಯಮುನಾ ವಿಹಾರದಲ್ಲಿ ಕಾರ್ಯಾಚರಿಸುವ ಪ್ರತಿಭಾ ವಿಕಾಸ ಶಾಲೆಗಳು ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಮುಂಬೈನ ವರ್ಲಿ ಸೀಫೇಸ್ ಪಬ್ಲಿಕ್ ಇಂಗ್ಲಿಷ್ ಸ್ಕೂಲ್ ನಾಲ್ಕನೇ ರ್ಯಾಂಕ್ ಮತ್ತು ಒಡಿಶಾದ ಗಂಜಾಂನಲ್ಲಿರುವ ಒಡಿಶಾ ಆದರ್ಶ ವಿದ್ಯಾಲಯ ಐದನೇ ರ್ಯಾಂಕ್ ಪಡೆದಿದೆ.
ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ, ಶಿಸ್ತು, ಸಮವಸ್ತ್ರ, ಸ್ವಚ್ಛತೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಮುಂತಾದ 14 ವಿಭಾಗಗಳಲ್ಲಿನ ಶ್ರೇಷ್ಠತೆಯ ಆಧಾರದ ಮೇಲೆ ಶ್ರೇಣಿಯನ್ನು ನೀಡಲಾಗುತ್ತಿದ್ದು, ಕಳೆದ ಬಾರಿ ನಡಕ್ಕಾವ್ ಶಾಲೆ 4ನೇ ಸ್ಥಾನ ಪಡೆದಿತ್ತು.
ದಿಲ್ಲಿಯ ಐದು ಶಾಲೆಗಳು, ಮಹಾರಾಷ್ಟ್ರದ ನಾಲ್ಕು ಮತ್ತು ಹರಿಯಾಣದ ಎರಡು ಶಾಲೆಗಳು ಮೊದಲ 15 ರ್ಯಾಂಕ್‌ಗಳಲ್ಲಿವೆ. ನಡಕ್ಕಾವ್ ಶಾಲೆ ಹೊರತುಪಡಿಸಿ, ಒಡಿಶಾ, ಪಶ್ಚಿಮ ಬಂಗಾಳ, ಪಂಜಾಬ್, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ತಲಾ ಒಂದು ಶಾಲೆ ಅಗ್ರ 15 ರೊಳಗೆ ಸ್ಥಾನ ಪಡೆದಿದೆ.
3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ನಡಕ್ಕಾವು ಶಾಲೆಯ ಅಭಿವೃದ್ಧಿಗೆ 2008ರಲ್ಲಿ ಅಂದಿನ ಶಾಸಕ ಎ. ಪ್ರದೀಪ್ ಕುಮಾರ್ ಚಾಲನೆ ನೀಡಿದ್ದರು.
ಫೈಝಲ್ ಮತ್ತು ಶಬಾನಾ ಫೌಂಡೇಶನ್ ಸಹಭಾಗಿತ್ವದಲ್ಲಿ 2012ರಲ್ಲಿ ಪ್ರಾರಂಭಗೊಂಡ 'ಪ್ರಿಸಂ' ಯೋಜನೆಯ ಸಹಭಾಗಿತ್ವದಲ್ಲಿ ಶಾಲೆಯು ಪ್ರಗತಿಗೆ ಮುಂದಡಿ ಇಟ್ಟಿತು. ಶಾಲೆಯ ಬೆಳವಣಿಗೆಗೆ ಪ್ರತಿಷ್ಠಾನದಿಂದ 20 ಕೋಟಿ ರೂ. ವ್ಯಯಿಸಲಾಗಿದೆ. ಇದೀಗ ಶಾಲೆಯ ಚಟುವಟಿಕೆಗಳನ್ನು ಪಿಟಿಎ ನೋಡಿಕೊಳ್ಳುತ್ತಿದೆ ಎಂದು ಪ್ರಾಚಾರ್ಯ ಕೆ.ಬಾಬು ಹೇಳಿದ್ದಾರೆ.