ನವದೆಹಲಿ: ಹೆಚ್ಚುತ್ತಿರುವ ಚಿಲ್ಲರೆ ಹಣದುಬ್ಬರ ಕುರಿತು ಚರ್ಚಿಸಲು ಆರ್ಬಿಐ ನ.3ರಂದು ತನ್ನ ಹಣಕಾಸು ನೀತಿ ಸಮಿತಿಯ ವಿಶೇಷ ಸಭೆಯನ್ನು ಕರೆದಿದೆ.
ಹಣದುಬ್ಬರವನ್ನು ಶೇ.2ರಿಂದ ಶೇ.6ರ ನಡುವೆ ಕಾಯ್ದುಕೊಳ್ಳುವುದು ಆರ್ಬಿಐ ಗುರಿಯಾಗಿದೆ. ಆದರೆ ಸೆಪ್ಟಂಬರ್ವರೆಗೆ ಕಳೆದ ಸತತ ಒಂಭತ್ತು ತಿಂಗಳುಗಳಿಂದಲೂ ಚಿಲ್ಲರೆ ಹಣದುಬ್ಬರವು ಶೇ.6ಕ್ಕಿಂತ ಮೇಲೆಯೇ ಇದೆ.
ಎಪ್ರಿಲ್ನಲ್ಲಿ ಶೇ.7.79ರ ಕಳೆದ ಎಂಟು ವರ್ಷಗಳಲ್ಲಿಯ ಗರಿಷ್ಠ ಮಟ್ಟವನ್ನು ತಲುಪಿದ್ದ ಹಣದುಬ್ಬರವು ಸೆಪ್ಟಂಬರ್ನಲ್ಲಿ ಶೇ.7.41ರಷ್ಟಿತ್ತು.
ಆರ್ಬಿಐನ ಮೂವರು ಮತ್ತು ಹೊರಗಿನ ಮೂವರು ಸದಸ್ಯರನ್ನು ಒಳಗೊಂಡಿರುವ ಹಣಕಾಸು ನೀತಿ ಸಮಿತಿಯು ಹಣದುಬ್ಬರವನ್ನು ನಿಯಂತ್ರಿಸುವ ಆರ್ಬಿಐ ಪ್ರಯತ್ನದ ಭಾಗವಾಗಿ ಸೆಪ್ಟಂಬರ್ನಲ್ಲಿ ರೆಪೊ ದರವನ್ನು ಶೇ.0.5ರಷ್ಟು ಹೆಚ್ಚಿಸಿತ್ತು. ನ.3ರ ಸಭೆಯು ಈ ವರ್ಷದಲ್ಲಿ ಹಣಕಾಸು ನೀತಿ ಸಮಿತಿಯ ಎರಡನೇ ವಿಶೇಷ ಸಭೆಯಾಗಲಿದ್ದು,ಮೇ ತಿಂಗಳಿನಲ್ಲಿ ಇಂತಹ ಮೊದಲ ಸಭೆ ನಡೆದಿತ್ತು.