ನವದೆಹಲಿ: ಉಣ್ಣೆಯಿಂದ ಹೆಣೆದಿರುವ 41.541 ಟೋಪಿಗಳನ್ನು ಪ್ರದರ್ಶಿಸುವ ಮೂಲಕ ವಾಯುಪಡೆ ಸಿಬ್ಬಂದಿ ಪತ್ನಿಯರ ಕಲ್ಯಾಣ ಸಹಕಾರವು (ಎಎಫ್‌ಡಬ್ಲ್ಯುಡಬ್ಲ್ಯುಎ) ಶನಿವಾರ ಗಿನ್ನಿಸ್ ವಿಶ್ವ ದಾಖಲೆ ಬರೆಯಿತು.
ಸಂಘಟನೆ ಹಮ್ಮಿಕೊಂಡಿದ್ದ 'ನಿಟ್ಟಾಟ್ಹಾನ್' ಅಭಿಯಾನದ ಅಂಗವಾಗಿ ದೇಶದಾದ್ಯಂತ ಎಎಫ್‌ಡಬ್ಲ್ಯುಡಬ್ಲ್ಯುಎಗೆ ಸೇರಿದ ಸುಮಾರು 3,000 ಮಹಿಳೆಯರು ಮೂರು ತಿಂಗಳ ಅವಧಿಯಲ್ಲಿ 41.541 ಟೋಪಿ ಹೆಣೆದಿದ್ದಾರೆ.
ಜುಲೈ 15ರಂದು ಆರಂಭವಾದ ಈ ಅಭಿಯಾನದ ಸಮಾರೋಪ ಸಮಾರಂಭವು ಅಕ್ಟೋಬರ್ 15ರಂದು ದೆಹಲಿಯ ವಾಯುಪಡೆ ಸಭಾಂಗಣದಲ್ಲಿ ನಡೆಯಿತು. ಸಭಾಂಗಣದ ಆವರಣದ ಹುಲ್ಲುಹಾಸಿನ ಮೇಲೆ ಟೋಪಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ವರ್ಧಮಾನ್ ಉಣ್ಣೆಯಿಂದ ಈ ಟೋಪಿಗಳನ್ನು ಹೆಣೆಯಲಾಗಿದೆ.
'ಹೆಣೆದಿರುವ ಟೋಪಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಇದು ಅಭೂತಪೂರ್ವ ದಾಖಲೆ. ಈ ವರ್ಗದಲ್ಲಿ ಇಂಥ ದಾಖಲೆ ಇದೇ ಮೊದಲು' ಎಂದು ಗಿನ್ನಿಸ್ ವಿಶ್ವದಾಖಲೆಯ ತೀರ್ಪುಗಾರ ರಿಶಿ ನಾಥ್ ತಿಳಿಸಿದರು.
'ಹೆಣೆಯಲಾಗಿರುವ ಟೋಪಿಗಳನ್ನು ಅಗತ್ಯವಿರುವವರಿಗೆ ಹಂಚಲಾಗುತ್ತದೆ. ಈ ಮೂಲಕ ಆತ್ಮನಿರ್ಭರರಾಗುವತ್ತ ಮಹಿಳೆಯರು ಒಂದು ಹೆಜ್ಜೆ ಇಟ್ಟಿದ್ದಾರೆ' ಎಂದು ಎಎಫ್‌ಡಬ್ಲ್ಯುಡಬ್ಲ್ಯುಎ ಅಧ್ಯಕ್ಷೆ ನೀತಾ ಚೌಧರಿ ತಿಳಿಸಿದ್ದಾರೆ. ಕೇಂದ್ರ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಅವರು 'ಖಚಿತತೆಯೊಂದಿಗಿನ ಭಾಗವಹಿಸುವಿಕೆ' ಎಂದು ಕರೆದಿದ್ದಾರೆ.
ಕಾರ್ಯಕ್ರಮಕ್ಕೂ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಭಾಂಗಣಕ್ಕೆ ಭೇಟಿ ನೀಡಿ ಎಎಫ್‌ಡಬ್ಲ್ಯುಡಬ್ಲ್ಯುಎ ಸದಸ್ಯರನ್ನು ಅಭಿನಂದಿಸಿದರು.