ನವದೆಹಲಿ: ದೇಶದಲ್ಲಿ ಮಂಜೂರಾಗಿರುವ ಒಟ್ಟು 165 ಮಾಹಿತಿ ಆಯುಕ್ತ ಹುದ್ದೆಗಳಲ್ಲಿ 42 ಹುದ್ದೆಗಳು ಖಾಲಿ ಇವೆ. ಎರಡು ರಾಜ್ಯಗಳಲ್ಲಿ ಮುಖ್ಯ ಮಾಹಿತಿ ಆಯುಕ್ತರೇ (ಸಿಐಎಸ್) ಇಲ್ಲ ಎಂದು ಅಧಿಕೃತ ವರದಿ ಮಂಗಳವಾರ ತಿಳಿಸಿದೆ.
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯ (ಟಿಟಿಐ) ಎಂಬ ಸರ್ಕಾರೇತರ ಸಂಸ್ಥೆ ಹೊರಡಿಸಿರುವ ಸರ್ಕಾರದ ಆರನೇ ಪಾರದರ್ಶಕ ವರದಿ-2022ರಲ್ಲಿ ಈ ಮಾಹಿತಿ ನೀಡಲಾಗಿದೆ.
ಖಾಲಿ ಇರುವ 42 ಹುದ್ದೆಗಳಲ್ಲಿ ಗುಜರಾತ್ ಮತ್ತು ಜಾರ್ಖಂಡ್‌ನ ಮುಖ್ಯ ಮಾಹಿತಿ ಆಯುಕ್ತ ಹುದ್ದೆಗಳು ಸೇರಿವೆ. ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಅತಿಹೆಚ್ಚು, ಅಂದರೆ ತಲಾ ನಾಲ್ಕು ಮಾಹಿತಿ ಆಯುಕ್ತರ ಸ್ಥಾನಗಳು ಖಾಲಿ ಇವೆ. ಉತ್ತರಾಖಂಡ, ಕೇರಳ, ಹರಿಯಾಣ ಮತ್ತು ಕೇಂದ್ರದಲ್ಲಿ ತಲಾ ಮೂರು ಮಾಹಿತಿ ಆಯುಕ್ತರ ಸ್ಥಾನಗಳು ಖಾಲಿ ಇವೆ. ಮಾಹಿತಿ ಆಯುಕ್ತ ಹುದ್ದೆಗೇರಿರುವ ಮಹಿಳೆಯರ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಾಹಿತಿ ಆಯೋಗಗಳ ಅಡಿ ದಾಖಲಾಗಿರುವ ಅಂಕಿಅಂಶಗಳ ಪ್ರಕಾರ 2005- 06ರಿಂದ 2020-21ರ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ 4,20 ಕೋಟಿಗೂ ಹೆಚ್ಚು ಅರ್ಜಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ವೀಕರಿಸಿವೆ ಎಂದು ವರದಿ ಹೇಳಿದೆ.
ಮಾಹಿತಿ ಬಹಿರಂಗಪಡಿಸುವ ವಿಚಾರದಲ್ಲಿ ಸಾರ್ವಜನಿಕ ಅಧಿಕಾರಿಗಳು ತೋರುವ ನಿರ್ಲಕ್ಷ್ಯ, ನಾಗರಿಕರ ಕಡೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತೋರುವ ದುರ್ವರ್ತನೆ, ಮಾಹಿತಿಯನ್ನು ಬಚ್ಚಿಡಲು ಮಾಹಿತಿ ಹಕ್ಕು ಕಾಯ್ದೆಯಲ್ಲಿ ನೀಡಲಾಗಿರುವ ಅವಕಾಶಗಳನ್ನು ತಪ್ಪಾಗಿ ಅರ್ಥೈಸುವುದು, ಸಾರ್ವಜನಿಕ ಹಿತದೃಷ್ಟಿ ಕುರಿತು ಸ್ಪಷ್ಟತೆ ಇಲ್ಲದಿರುವುದು, ಪಾರದರ್ಶಕ ನೀತಿಯ ಪರಿಣಾಮಕಾರಿ ಜಾರಿಗೆ ಗೌಪ್ಯತೆಯ ಹಕ್ಕು ಅಡ್ಡಿಯುಂಟು ಮಾಡುವುದು ಮುಂತಾದ ತೊಡಕುಗಳನ್ನು ಮಾಹಿತಿ ಹಕ್ಕುನ ಕಾಯ್ದೆ ಎದುರಿಸುತ್ತಿದೆ ಎಂದು ವರದಿ ಹೇಳಿದೆ.