ನವದೆಹಲಿ: ದೇಶದ 200ಕ್ಕೂ ಹೆಚ್ಚು ನಗರಗಳಲ್ಲಿ ಮುಂದಿನ ಆರು ತಿಂಗಳಲ್ಲಿ 5ಜಿ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಘೋಷಿಸಿದ್ದಾರೆ. ಶನಿವಾರ ಇಂಡಿಯಾ ಮೊಬೈಲ್ ಕಾಂಗ್ರೆಸ್ನಲ್ಲಿ (ಐಎಂಸಿ) ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಿದ ಬೆನ್ನಲ್ಲೇ ವೈಷ್ಣವಿ ಐಎಂಸಿ ಕಾರ್ಯಕ್ರಮದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಸಂಸ್ಥೆ (ಬಿಎಸ್ಎನ್ಎಲ್) 2023 ಆಗಸ್ಟ್ 15ರಂದು ದೇಶದಲ್ಲಿ 5ಜಿ ಸೇವೆಗಳನ್ನು ಆರಂಭಿಸಲಿದೆ ಎಂದು ವೈಷ್ಣವ್ ಘೋಷಿಸಿದರು. ದೇಶದ ಶೇಕಡ 80ರಿಂದ 90 ಭಾಗಗಳಲ್ಲಿ ಈ ಸೇವೆ ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಂದು ಸಚಿವರು ತಿಳಿಸಿದರು.
6ಜಿ ಸೇವೆಯಲ್ಲೂ ದೇಶ ಮುನ್ನಡೆ: ದೇಶವು 6ಜಿ ದೂರಸಂಪರ್ಕ ಸೇವೆಯಲ್ಲೂ ಮುನ್ನಡೆ ಸಾಧಿಸಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರನೇ ತಲೆಮಾರಿನ ವೈರ್ಲೆಸ್ ತಂತ್ರಜ್ಞಾನದಲ್ಲಿ ಭಾರತ ಜಾಗತಿಕವಾಗಿ ಮುನ್ನಡೆ ಸಾಧಿಸುವುದನ್ನು ನೋಡುವುದು ಪ್ರಧಾನಿ ಮೋದಿ ಬಯಕೆಯಾಗಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಐಐಟಿ ಹೈದರಾಬಾದ್ ಬೂತ್ಗೆ ಸಚಿವರು ಭೇಟಿ ನೀಡಿದರು.
ಈ ಸಂಸ್ಥೆಯು 6ಜಿ ತಂತ್ರಜ್ಞಾನದ ಮೂಲ ಮಾದರಿಗಳನ್ನು ಪ್ರದರ್ಶಿಸಿದ್ದು, 5ಜಿಗೆ ಹೋಲಿಸಿದರೆ ನೆಟ್ವರ್ಕ್ ವೇಗದಲ್ಲಿ 2-3 ಪಟ್ಟು ಸ್ಪೆಕ್ಟ್ರಲ್ ದಕ್ಷತೆಯನ್ನು ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ. 6ಜಿ ಅಭಿವೃದ್ಧಿಗೆ ಸಹಾಯ ಮಾಡುವ ಕೆಲವು ಪೇಟೆಂಟ್ಗಳನ್ನು ಸಂಸ್ಥೆಗೆ ನೀಡಲಾಗಿದೆ. ತಂತ್ರಜ್ಞಾನವು ಮುಂದುವರಿದಂತೆ ಹೊಸ ಪೇಟೆಂಟ್ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು 6ಜಿ ಅಭಿವೃದ್ಧಿ ಯೋಜನೆಯ ಮುಖ್ಯಸ್ಥರಾಗಿರುವ ಐಐಟಿ ಹೈದರಾಬಾದ್ ಪ್ರಾಧ್ಯಾಪಕ ಕಿರಣ್ ಕುಚಿ ಹೇಳಿದ್ದಾರೆ.