ನವದೆಹಲಿ: ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಡಿಯೊ, ನಗ್ನತೆಗೆ ಸಂಬಂಧಿತ ವಿಷಯಗಳನ್ನು ಉತ್ತೇಜಿಸುವ 57,643 ಖಾತೆಗಳನ್ನು ರದ್ದು ಮಾಡಿರುವುದಾಗಿ ಟ್ವಿಟರ್ ಶನಿವಾರ ಹೇಳಿದೆ.
ಭಾರತಕ್ಕೆ ಸಂಬಂಧಿಸಿದಂತೆ ಟ್ವಿಟರ್ ವೇದಿಕೆಯಲ್ಲಿ ಮಕ್ಕಳ ಅಶ್ಲೀಲತೆ ಪ್ರಸರಣವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಹೀಗಾಗಿ ಟ್ವಿಟರ್ ವಿವಾದ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯ ಖಾತೆಗಳನ್ನು ಜುಲೈ 26 ರಿಂದ ಆಗಸ್ಟ್ 25ರ ನಡುವಿನ ಅವಧಿಯಲ್ಲಿ ಡಿಲಿಟ್ ಮಾಡಿರುವುದಾಗಿ ಟ್ವಿಟರ್ ತಿಳಿಸಿದೆ.
ಈ ವಾರದ ಆರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ 'ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿಡಿಯೊಗಳ ಪ್ರಸರಣೆಗೆ ಸಂಬಂಧಿಸಿದಂತೆ ಟ್ವಿಟರ್ ನೀಡಿರುವ ಉತ್ತರಗಳು ಅಪೂರ್ಣವಾಗಿವೆ ಮತ್ತು ಈ ಬಗ್ಗೆ ಆಯೋಗವು ತೃಪ್ತಿ ಹೊಂದಿಲ್ಲ' ಎಂದಿದ್ದರು.
ಮಕ್ಕಳ ಲೈಂಗಿಕ ಶೋಷಣೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರದ ವಿಡಿಯೊಗಳು ಟ್ವಿಟರ್‌ನಲ್ಲಿ ಪ್ರಸರಣಗೊಳ್ಳುತ್ತಿರುವ ಬಗ್ಗೆ ಸ್ವಾತಿ ಮಲಿವಾಲ್ ಅವರು ಸೆಪ್ಟೆಂಬರ್ 20 ರಂದು ಟ್ವಿಟರ್ ಇಂಡಿಯಾದ ನೀತಿ ನಿರೂಪಣೆ ವಿಭಾಗದ ಮುಖ್ಯಸ್ಥರು ಮತ್ತು ದೆಹಲಿ ಪೊಲೀಸರಿಗೆ ಸಮನ್ಸ್ ನೀಡಿದ್ದರು.
ಮಕ್ಕಳನ್ನು ಒಳಗೊಂಡಿರುವ ಲೈಂಗಿಕ ಕ್ರಿಯೆಗಳ ವಿಡಿಯೊಗಳು ಮತ್ತು ಛಾಯಾಚಿತ್ರಗಳನ್ನು ಬಹಿರಂಗವಾಗಿ ಬಿಂಬಿಸುವ ಹಲವಾರು ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. 'ಹೆಚ್ಚಿನ ಟ್ವೀಟ್‌ಗಳು ಮಕ್ಕಳನ್ನು ಸಂಪೂರ್ಣವಾಗಿ ಬೆತ್ತಲೆಯಾಗಿ ತೋರಿಸಿವೆ. ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಅಥವಾ ಸಮ್ಮತಿ ಇಲ್ಲದ ಲೈಂಗಿಕ ಚಟುವಟಿಕೆಗಳನ್ಳೇ ಅವುಗಳಲ್ಲಿ ಟ್ವೀಟ್‌ಗಳು ಪ್ರದರ್ಶಿಸಿವೆ' ಎಂದು ಆಯೋಗ ಹೇಳಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿನ ಬಳಕೆದಾರರಿಂದ 1,088 ದೂರು ಬಂದಿವೆ ಎಂದು ಟ್ವಿಟರ್ ಕೂಡ ಹೇಳಿತ್ತು. ಈ ಸಂಬಂಧ 41 ಯುಆರ್‌ಎಲ್‌ಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿಯೂ ಟ್ವಿಟರ್ ತಿಳಿಸಿದೆ.
ಇನ್ನೊಂದೆಡೆ, ಟ್ವಿಟರ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಡಿಯೊಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಟ್ವಿಟರ್‌ಗೆ ನೀಡುವ ಜಾಹೀರಾತುಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿವೆ ಎಂದು ವರದಿಗಳಾಗಿವೆ.