ಮಂಜೇಶ್ವರದ ಉಪಜಿಲ್ಲಾ ಶಾಳಾ ವಿಜ್ಞಾನ-ವೃತ್ತಿ ಪರಿಚಯ ಮೇಳ ನಡೆಯುತ್ತಿದ್ದ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಪ್ಪರ ಕುಸಿದು ಬಿದ್ದ ಪರಿಣಾಮ ಗಾಯಗೊಂಡಿರುವ ಒಟ್ಟು 59 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 11ಮಂದಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆ, 3 ಮಂದಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ, 7ಮಂದಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ.ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಸ್ಥಿತಿ ಚಿಂತಾಜನಕವಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಜಿಲ್ಲಾ ಪೆÇಲೀಸ್ ವರಿಷ್ಠ ಡಾ.ವೈಭವ್ ಸಕ್ಸೇನಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಭೇಟಿ ನೀಡಿ ಘಟನೆ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಮಡರು. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಗುತ್ತಿಗೆದಾರರ ನಿರ್ಲಕ್ಷ್ಯ?:
ಚಪ್ಪರ ನಿರ್ಮಿಸುವಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆ ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದು, ಯಾವುದೇ ಸುರಕ್ಷಾ ಕ್ರಮಗಳಿಲ್ಲದೆ ಟಿನ್‍ಶೀಟ್‍ಗಳನ್ನು ಚಪ್ಪರದ ಮೇಲೆ ಹಾಸಿಬಿಡಲಾಗಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ. ಚಪ್ಪರ ನಿರ್ಮಾಣದ ನಂತರ ಸಂಬಂಧಪಟ್ಟ ಅಧಿಕಾರಿಗಳು ಯಾ ಪೊಲೀಸರು ಚಪ್ಪರದ ದೃಢತೆ ಬಗ್ಗೆ ಖಚಿತಪಡಿಸದೆ, ದುರಂತ ಸಂಭವಿಸಿದ ನಂತರ ಗೋಳಿಡುತ್ತಿರುವುದರ ವಿರುದ್ಧ ಹೆತ್ತವರು ಹಾಗೂ ಸ್ಥಳೀಯ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರ, ಸಹಾಯಿ ಬಂಧನ:
ಚಪ್ಪರ ನಿರ್ಮಾಣ ಗುತ್ತಿಗೆದಾರ ಹಾಗೂ ಇವರ ಸಹಾಯಿ ಸೇರಿದಂತೆ ನಾಲ್ಕು ಮಂದಿಯನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅವರ ನಿರ್ದೇಶ ಪ್ರಕಾರ ಈ ಬಂಧನ ನಡೆದಿದೆ.
ಬೇಕೂರು ಶಾಲೆಯಲ್ಲಿ ಚಪ್ಪರ ದುರಂತ: 59ಮಂದಿ ಆಸ್ಪತ್ರೆ ದಾಖಲು
0
ಅಕ್ಟೋಬರ್ 21, 2022