ಬದರಿನಾಥ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಉದ್ಯಮಿ ಮುಕೇಶ್ ಅಂಬಾನಿ ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳ ಬದರಿನಾಥಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ತಮ್ಮ ಸಂಗಡಿಗರ ಜೊತೆ ಹೆಲಿಕಾಪ್ಟರ್ ಮೂಲಕ ಹಿಮಾಲಯದ ದೇವಸ್ಥಾನಕ್ಕೆ ಆಗಮಿಸಿದ ಅಂಬಾನಿ, ವಿಶೇಷ ಪೂಜೆ ನೆರವೇರಿಸಿದರು ಎಂದು ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ ಉಪಾಧ್ಯಕ್ಷ ಕಿಶೋರ್ ಪನ್ವಾರ್ ತಿಳಿಸಿದ್ದಾರೆ.
ಅಲ್ಲದೆ, ಬದರಿನಾಥ ಮತ್ತು ಕೇದಾರನಾಥದಲ್ಲಿ ಸೌಲಭ್ಯ ಒದಗಿಸಲು ₹5 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಮುಕೇಶ್ ಅಂಬಾನಿ, ಅವರ ಹೆಂಡತಿ ನೀತಾ ಅಂಬಾನಿ, ಮಗ ಆಕಾಶ್ ಅಂಬಾನಿಯನ್ನು ಕೊಲ್ಲುವುದಾಗಿ ಇತ್ತೀಚೆಗೆ ಬೆದರಿಕೆ ಕರೆಬಂದಿತ್ತು. ಅಂಬಾನಿಯವರ ಮನೆ ಮತ್ತು ಅವರ ಒಡೆತನದ ಆಸ್ಪತ್ರೆಯನ್ನೂ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು.
ಬೆದರಿಕೆ ಬೆನ್ನಲ್ಲೇ ಅಂಬಾನಿ ಮನೆಗೆ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಏಜೆನ್ಸಿಗಳಿಂದ ಮಾಹಿತಿ ಪಡೆದ ಕೇಂದ್ರ ಸರ್ಕಾರ, ಮುಕೇಶ್ ಅಂಬಾನಿಯವರಿಗೆ ಝೆಡ್ ಪ್ಲಸ್ ಭದ್ರತೆ ಒದಗಿಸಿದೆ. ಈ ಹಿಂದೆ ಅವರಿಗೆ ಝೆಡ್ ಭದ್ರತೆ ಇತ್ತು. ಅವರ ಹೆಂಡತಿ ನೀತಾ ಅಂಬಾನಿಯವರಿಗೆ ವೈ ಪ್ಲಸ್ ಭದ್ರತೆ ಇದೆ.