ನವದೆಹಲಿ :ಭಾರತದ 5ಜಿ ತಂತ್ರಜ್ಞಾನದ ಕೆಲ ಪ್ರಮುಖ ಬಿಡಿಭಾಗಗಳನ್ನು ದಕ್ಷಿಣ ಕೊರಿಯಾದಂಥ ದೇಶಗಳಿಂದ ಆಮದು ಮಾಡಿಕೊಂಡಿರುವುದು ಹೊರತುಪಡಿಸಿದರೆ ಸಂಪೂರ್ಣ ಸ್ವದೇಶಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union finance minister Nirmala Sitharaman) ಪ್ರತಿಪಾದಿಸಿದ್ದಾರೆ.
ಜಾನ್ ಹಾಕಿನ್ಸ್ ಸ್ಕೂಲ್ ಆಫ್ ಅಡ್ವಾನ್ಸ್ ಇಂಟರ್‌ನ್ಯಾಷನಲ್ ಸ್ಟಡೀಸ್ (Johns Hopkins School of Advanced International Studies) ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವ ವೇಳೆ "ಭಾರತ ತನ್ನ 5ಜಿ ತಂತ್ರಜ್ಞಾನವನ್ನು ಇತರ ದೇಶಗಳ ಜತೆಗೂ ಹಂಚಿಕೊಳ್ಳಲು ಸಿದ್ಧ" ಎಂದು ಹೇಳಿದ್ದಾರೆ.
"ಭಾರತದ 5ಜಿ ತಂತ್ರಜ್ಞಾನ ಬಗೆಗಿನ ವಿವರಗಳು ಇನ್ನೂ ಸಾರ್ವಜನಿಕರನ್ನು ತಲುಪಬೇಕಿದೆ. ನಾವು ದೇಶದಲ್ಲಿ ಆರಂಭಿಸಿರುವ 5ಜಿ ತಂತ್ರಜ್ಞಾನ ಸಂಪೂರ್ಣ ಸ್ವತಂತ್ರ್ಯ ಎಂದು ಸ್ಪಷ್ಟಪಡಿಸಿದ್ದಾರೆ.
"ಹಾಗೆ ಹೇಳುವುದಾದರೆ ಕೆಲ ಪ್ರಮುಖ ಬಿಡಿಭಾಗಗಳನ್ನು ದಕ್ಷಿಣ ಕೊರಿಯಾದಂಥ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆಯೇ ವಿನಃ ಬೇರೆ ಯಾರಿಂದಲೂ ಪಡೆದಿಲ್ಲ. ಆದ್ದರಿಂದ ಸಂಪೂರ್ಣ ದೇಶೀಯ ತಂತ್ರಜ್ಞಾನವನ್ನು, ಇಚ್ಛಿಸುವ ಇತರ ದೇಶಗಳಿಗೆ ಒದಗಿಸಬಹುದಾಗಿದೆ" ಎಂದರು.
ಈಗಾಗಲೇ ಖಾಸಗಿ ಕಂಪನಿಗಳು 5ಜಿ ತಂತ್ರಜ್ಞಾನ ಸೇವೆಯನ್ನು ಕೆಲ ನಗರಗಳಲ್ಲಿ ಆರಂಭಿಸಿದ್ದು, 2024ರ ಕೊನೆಯ ವೇಳೆಗೆ ಇಡೀ ದೇಶಕ್ಕೆ ಇದು ಲಭ್ಯವಾಗಲಿದೆ. ಭಾರತದ 5ಜಿ ಸೇವೆ ಭಾರತ ಹೆಮ್ಮೆಪಡುವಂಥದ್ದು ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ hindustantimes.com ವರದಿ ಮಾಡಿದೆ.