ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಂಭವಿಸಿದ ಪ್ರವಾಹದ ಬಿಕ್ಕಟ್ಟಿನ ನಂತರ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಭಾರತದಿಂದ 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.
ಪಾಕಿಸ್ತಾನದ 32 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ.
ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ಮಲೇರಿಯಾ ಹರಡುತ್ತಿದೆ. ಹೀಗಾಗಿ ನಾಗರಿಕರನ್ನು ರಕ್ಷಿಸುವ ಸಲುವಾಗಿ ಸೊಳ್ಳೆ ಪರದೆಯ ಅವಶ್ಯಕತೆ ಪಾಕಿಸ್ತಾನಕ್ಕಿದೆ. ಬಹುತೇಕ ಮಕ್ಕಳು ಸೊಳ್ಳೆಗಳಿಂದ ಹರಡುವ ರೋಗಕ್ಕೆ ತುತ್ತಾಗುತ್ತಿದ್ದಾರೆ. ನವಂಬರ್ ಮಧ್ಯ ಭಾಗದಲ್ಲಿ ವಾಘಾ ಗಡಿಯ ಮೂಲಕ ಭಾರತದಿಂದ ಸೊಳ್ಳೆ ಪರದೆಗಳು ಪಾಕಿಸ್ತಾನ ತಲುಪುವ ಭರವಸೆ ಇದೆ ಎಂದು ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಹವಾಮಾನ ವೈಪರಿತ್ಯದಿಂದ ಪಾಕಿಸ್ತಾನದಲ್ಲಿ ವಿಪತ್ತು ಸಂಭವಿಸಿದೆ. ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಈಗಾಗಲೇ 1600 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದು ತಿಂಗಳು ವಿಶ್ವ ಆರೋಗ್ಯ ಸಂಸ್ಥೆ (WHO) ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.