ನವದೆಹಲಿ :ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣ ಎನ್ನಲಾದ ಕೆಮ್ಮು ಔಷಧಿಯ ಉತ್ಪಾದನಾ ಸಂಸ್ಥೆಯಾದ ಮೇಡನ್ ಫಾರ್ಮಸ್ಯೂಟಿಕಲ್ಸ್, ಈ ಔಷಧಿಗಳ ಉತ್ಪಾದನೆಯಲ್ಲಿ ಬಳಸಲಾಗುವ ಕಚ್ಚಾವಸ್ತುವಿನ ಗುಣಮಟ್ಟ ಪರೀಕ್ಷೆ ನಡೆಸಿಲ್ಲ ಎಂಬ ಅಂಶ ಇದೀಗ ಬಹಿರಂಗವಾಗಿದೆ.
ಕಂಪೆನಿಯ ಅಧಿಕೃತ ತಪಾಸಣೆ ನಡೆಸಿದ ಅಧಿಕಾರಿಗಳು ನೀಡಿದ ನೋಟಿಸ್‍ನಲ್ಲಿ ಈ ಅಂಶದ ಉಲ್ಲೇಖವಿದೆ ಎಂದು hindustantimes.com ವರದಿ ಮಾಡಿದೆ.
ಔಷಧ ಉತ್ಪಾದನೆಗೆ ಬಳಸುವ ಪ್ರೊಪೆಲೀನ್ ಗ್ಲೈಕೋಲ್‌ನಲ್ಲಿ ಡೈಥಲೀನ್ ಗ್ಲೈಕೋಲ್ ಹಾಗೂ ಎಥಿಲೀನ್ ಗ್ಲೈಕೋಲ್‌ನಂಥ (diethylene glycol and ethylene glycol) ವಿಷಕಾರಿ ರಾಯಸಾಯನಿಕಗಳು ಸೇರಿ ಕಲಬೆರಕೆಯಾಗಿರುವ ಸಾಧ್ಯತೆ ಇರುತ್ತದೆ. ವಿಶ್ವ ಆರೋಗ್ಯಸಂಸ್ಥೆ ಹೇಳುವಂತೆ ಇದು ಮಕ್ಕಳ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ. ಈ ಕಚ್ಚಾವಸ್ತುವಿನ ಬಳಕೆಗೆ ಮುನ್ನ ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣ ಅಗತ್ಯ ಎಂದು ತಜ್ಞರು ಹೇಳುತ್ತಾರೆ.
ಹರ್ಯಾಣ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಓ) ಜತೆ ಜಂಟಿಯಾಗಿ ತಪಾಸಣೆ ನಡೆಸಿದ ಬಳಿಕ ಮೇಡನ್ ಫಾರ್ಮಸ್ಯೂಟಿಕಲ್ಸ್‌ಗೆ ಅಕ್ಟೋಬರ್ 7ರಂದು ನೋಟಿಸ್ ನೀಡಿದ್ದಾರೆ. ಪ್ರೊಪಲೈನ್ ಗ್ಲೈಕೋಲ್‌ನಲ್ಲಿ ಡೈಥಲೀನ್ ಗ್ಲೈಕೋಲ್ ಹಾಗೂ ಎಥೆಲೀನ್ ಗ್ಲೈಕೋಲ್ ಸೇರಿದೆಯೇ ಎಂಬ ಬಗ್ಗೆ ಕಂಪನಿ ಗುಣಮಟ್ಟ ಪರೀಕ್ಷೆ ನಡೆಸಿಲ್ಲ" ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ. ಈ ನೋಟಿಸ್‍ಗೆ ಅಕ್ಟೋಬರ್ 14ರ ಒಳಗೆ ಕಂಪನಿ ಉತ್ತರಿಸಬೇಕಾಗಿದ್ದು, ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟಿಸ್‍ನಲ್ಲಿ ಸ್ಪಷ್ಟಪಡಿಸಲಾಗಿದೆ.