ನವದೆಹಲಿ: ದೇಶದಾದ್ಯಂತ ಕಳೆದ ಏಳು ವರ್ಷಗಳಲ್ಲಿ ನಾಯಿಕಡಿತದ ಪ್ರಕರಣಗಳ ಮಾಹಿತಿ ಮತ್ತು ಅಂಥ ಘಟನೆಗಳ ಬಗ್ಗೆ ಕೈಗೊಂಡ ಕ್ರಮಗಳ ಕುರಿತಂತೆ ಮಾಹಿತಿ ಒದಗಿಸುವಂತೆ ಪ್ರಾಣಿಗಳ ಕಲ್ಯಾಣ ಮಂಡಳಿಗೆ (ಎಡಬ್ಲ್ಯುಬಿಐ) ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠವು ಎಡಬ್ಲ್ಯುಬಿಐಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿ, ಈ ಸಂಬಂಧ ಮಂಡಳಿಯು ನ್ಯಾಯಾಲಯದ ಮಾರ್ಗಸೂಚಿಗಳನ್ನು ಬಯಸುತ್ತದೆಯೇ ಎಂದೂ ಕೇಳಿದೆ.
ಕೇರಳ ಮತ್ತು ಮುಂಬೈನಲ್ಲಿ ಬೀದಿ ನಾಯಿಗಳನ್ನು ಕೊಲ್ಲುವ ಕುರಿತು ವಿವಿಧ ಸ್ಥಳೀಯ ಸಂಸ್ಥೆಗಳು ಹೊರಡಿಸಿರುವ ಆದೇಶಗಳಿಗೆ ಸಂಬಂಧಪಟ್ಟ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದೂ ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೇ, ಬೀದಿನಾಯಿಗಳಿಗೆ ಆಹಾರ ನೀಡುವವರು ಅವುಗಳಿಗೆ ಲಸಿಕೆ ಹಾಕುವ ಜವಾಬ್ದಾರಿಯನ್ನೂ ವಹಿಸಿಕೊಳ್ಳಬಹುದು ಮತ್ತು ಯಾರಾದರೂ ಆ ಪ್ರಾಣಿಗಳಿಂದ ದಾಳಿಗೊಳಗಾದರೆ ಚಿಕಿತ್ಸೆಯ ವೆಚ್ಚವನ್ನೂ ಆಹಾರ ನೀಡುವವರೇ ಭರಿಸಬೇಕು ಎಂದೂ ಸೂಚಿಸಿತ್ತು.