ನವದೆಹಲಿ: ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟುಬಿದ್ದು ಕಳೆದ 7 ತಿಂಗಳಿನಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಮಹಿಳೆಯೊಬ್ಬರು ಕಳೆದ ವಾರ ಆರೋಗ್ಯವಂತ ಹೆಣ್ಣುವಿಗೆ ಜನ್ಮ ನೀಡಿದ್ದಾರೆ.
ಬುಲಂದ್‌ಶಹರ್ ಮೂಲದ 23 ವರ್ಷದ ಗರ್ಭಿಣಿ ಮಹಿಳೆಯಬ್ಬರು ಹೆಲ್ಮೆಟ್ ಧರಿಸದೇ ಗಂಡನ ಜೊತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಕೋಮಾ ಸ್ಥಿತಿಗೆ ತಲುಪಿದ್ದಳು. ಬಳಿಕ ಆಕೆಯನ್ನು ಏಮ್ಸ್'ಗೆ ದಾಖಲಿಸಲಾಗಿತ್ತು.
ಅಪಘಾತದಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರೂ ಆಶ್ಚರ್ಯಕರವೆಂಬಂತೆ ಗರ್ಭದಲ್ಲಿದ್ದ ಮಗುವಿಗೆ ಮಾತ್ರ ಯಾವುದೇ ಹಾನಿಯಾಗಿರಲಿಲ್ಲ. ಹೀಗಾಗಿ ಗರ್ಭಪಾತ ಮಾಡಿಸುವ ಬದಲು ಆಕೆಯ ಮನೆಯವರು ಮಗುವನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು. ಮಹಿಳೆಯನ್ನು 3 ತಿಂಗಳು ವೆಂಟಿಲೇಟರ್‌ನಲ್ಲಿಟ್ಟು ಬಳಿಕ ಆಕೆಗೆ ಹಲವಾರು ಶಸ್ತ್ರಚಿಕಿತ್ಸೆ ಮಾಡಲಾಯಿತು. ಹಾನಿಗೊಳಗಾದ ಮೆದುಳಿನ ಭಾಗವನ್ನೂ ತೆಗೆಯಲಾಯಿತು. ಇದರೊಂದಿಗೆ 5 ನರಸಂಬಂಧಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.
ಆದರೆ ಇದೆಲ್ಲದರ ಹೊರತಾಗಿಯೂ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ. ಇಷ್ಟಾಗಿಯೂ ಅಚ್ಚರಿಯೆಂಬಂತೆ ಮಹಿಳೆ ಕೋಮಾವಸ್ಥೆಯಲ್ಲಿದ್ದ 7 ತಿಂಗಳ ಬಳಿಕವೂ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಅಪಘಾತವಾದ ಬಳಿಕ ಮೊದಲಿಗೆ ಮಹಿಳೆಯನ್ನು ಬುಲಂದ್ ಶೆಹರ್ ನಲ್ಲಿರುವ ಅಬ್ದುಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 6 ವಾರಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆ, ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ 40 ದಿನಗಳ ಗರ್ಭಾವಸ್ಥೆಯಲ್ಲಿದ್ದರು. ಆಸ್ಪತ್ರೆಗೆ ಬಂದಾಗಲೇ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ವೆಂಟಿಲೇಟರ್ ಅಳವಡಿಸಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಮಹಿಳೆಗೆ ಎದೆಹಾಲು ಕುಡಿಸುವ ಸಾಮರ್ಥ್ಯ ಇಲ್ಲದ ಕಾರಣ ಮಗುವಿಗೆ ಬಾಟಲಿ ಹಾಲನ್ನು ಕೊಡಲಾಗುತ್ತಿದೆ. ಮಗು ಆರೋಗ್ಯದಿಂದಿದೆ’ ಎಂದು ಏಮ್ಸ್ ವೈದ್ಯರು ಹೇಳಿದ್ದಾರೆ.