ತಿರುವನಂತಪುರ: ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಸೇರಿ 9 ಮಂದಿ ಮೃತಪಟ್ಟಿರುವ ಘಟನೆ ಪಾಲಕ್ಕಾಡ್ ಜಿಲ್ಲೆಯ ವಡಕ್ಕಾಂಚೇರಿಯಲ್ಲಿ ನಡೆದಿದೆ ಎಂದು ಕೇರಳದ ಸಾರಿಗೆ ಸಚಿವ ಆಂಟೋನಿ ರಾಜು ತಿಳಿಸಿದ್ದಾರೆ.
ಬುಧವಾರ ತಡರಾತ್ರಿ 11.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳು ರಸ್ತೆಯಿಂದ ಪಕ್ಕಕ್ಕೆ ಸರಿದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೃತಪಟ್ಟಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಖಾಸಗಿ ಬಸ್‌ನ ಅತಿಯಾದ ವೇಗ ಮತ್ತು ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಕೆಎಸ್‌ಆರ್‌ಟಿಸಿ ಬಸ್ ಕೇರಳದ ಕೊಟ್ಟಾರಕ್ಕರದಿಂದ ತಮಿಳುನಾಡಿನ ಕೊಯಂಬತ್ತೂರಿಗೆ ತೆರಳುತ್ತಿತ್ತು. ಬಸ್‌ನಲ್ಲಿದ್ದ 81 ಪ್ರಯಾಣಿಕರ ಪೈಕಿ 3 ಮಂದಿ ಮೃತಪಟ್ಟಿದ್ದಾರೆ ಎಂದು ಆಂಟೋನಿ ರಾಜು ಹೇಳಿದ್ದಾರೆ.
ಖಾಸಗಿ ಬಸ್‌ನಲ್ಲಿ ಎರ್ನಾಕುಲಂನ ಬಸೆಲಿಯೋಸ್ ವಿದ್ಯಾನಿಕೇತನ ಶಾಲೆಯ 42 ವಿದ್ಯಾರ್ಥಿಗಳು ಮತ್ತು 5 ಶಿಕ್ಷಕರು ಪ್ರವಾಸಕ್ಕೆ ತೆರಳುತ್ತಿದ್ದರು.
ಗಾಯಾಳುಗಳು ದಾಖಲಾಗಿರುವ ಪಾಲಕ್ಕಾಡ್‌ನ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಸ್ಥಳೀಯಾಡಳಿತ ಸಚಿವ ಎಂ ಬಿ ರಾಜೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಉಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.