ಮೊರ್ಬಿ: ಗುಜರಾತ್‌ನ ಮೊರ್ಬಿ ತೂಗು ಸೇತುವೆ ದುರಂತದಲ್ಲಿ 130ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಒಂಬತ್ತು ಜನರನ್ನು ಬಂಧಿಸಿದ್ದಾರೆ.
'ಸೇತುವೆಯನ್ನು ನವೀಕರಿಸಿದ್ದ 'ಓರೆವಾ' ಕಂಪನಿಯ ವ್ಯವಸ್ಥಾಪಕರು, ಟಿಕೆಟ್ ಕಲೆಕ್ಟರ್‌ಗಳು, ಸೇತುವೆ ದುರಸ್ತಿ ಗುತ್ತಿಗೆದಾರರು ಮತ್ತು ಜನಸಂದಣಿ ನಿಯಂತ್ರಿಸುವ ಹೊಣೆ ಹೊತ್ತಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
'ಮೊರ್ಬಿಯಲ್ಲಿ ಅಹಿತಕರ ಘಟನೆ ನಡೆದಿದುಹೋಗಿದೆ. ಅದಕ್ಕೆ ನಮ್ಮ ಸಂತಾಪವಿದೆ. ಕಠಿಣ ಕ್ರಮ ಕೈಗೊಳ್ಳಲು ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು' ಎಂದು ರಾಜ್‌ಕೋಟ್‌ನ ಐಜಿಪಿ ಅಶೋಕ್ ಯಾದವ್ ಹೇಳಿದರು.
ಘಟನೆಯ ತನಿಖೆ ನಡೆದಂತೆ, ಸಾಕ್ಷ್ಯಾಧಾರಗಳು ಲಭ್ಯವಾದಂತೆ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನೂ ರಚಿಸಿದ್ದೇವೆ ಎಂದು ಅಶೋಕ್ ಯಾದವ್ ತಿಳಿಸಿದರು.