ಮುಳ್ಳೇರಿಯ: ಭಾರತದಲ್ಲಿ ಬದುಕುವುದೇ ಭಾಗ್ಯ. ಪುಣ್ಯದಿಂದ ಭಾರತದಲ್ಲಿ ನಾವು ಜನ್ಮವೆತ್ತಿದ್ದೇವೆ. ವಿಶ್ವವನ್ನು ಸೃಷ್ಟಿ ಮಾಡಿರುವ ದೇವರೇ ಭಾರತವನ್ನು ಸೃಷ್ಟಿ ಮಾಡಿರುತ್ತಾನೆ. ಆದರೆ ಭಾರತದ ಸೃಷ್ಟಿಯಲ್ಲಿ ದೇವರ ವಿಶೇಷ ಸಂಕಲ್ಪವಿದೆ. ಜಗತ್ತನ್ನು ಸೃಷ್ಟಿಮಾಡಿದಾತನಲ್ಲಿಗೆ ಮರಳಿ ತಲುಪಲು ಹಲವು ಬಾಗಿಲುಗಳು ಭಾರತದಲ್ಲಿ ತೆರೆದಿದೆ. ಪ್ರಕೃತಿಯನ್ನು ಆರಾಧಿಸುವ ಸ್ಥಳ ಇದು. ಭಗವನ್ಮಾರ್ಗವನ್ನು ತೆರೆದುಕೊಡುವ ಪುಣ್ಯಭೂಮಿ ಭಾರತದಲ್ಲಿ ನಮ್ಮ ಜನ್ಮ ಆಗಿದೆ. ಋಷಿಮಹರ್ಷಿಗಳ ಪರಂಪರೆಗೆ ವಾರೀಸುದಾರರಾದ ಮೇಲೆ ಇದನ್ನು ಉಳಿಸಿ ಬೆಳೆಸಲು ನಮ್ಮ ಕೊಡುಗೆ ಏನು ಎಂಬುದನ್ನು ನಾವು ಅವಲೋಕಿಸಬೇಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ನುಡಿದರು.
ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆದ ದೀಪಾವಳಿ ಸಂಗೀತೋತ್ಸವದ 6ನೇ ದಿನದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಈ ದೇಶದ ವಿದ್ಯೆ, ಕಲೆ, ಪರಂಪರೆ, ಸಂಪ್ರದಾಯದ ಉಳಿಕೆಗೆ ನಮ್ಮ ಕೊಡುಗೆ ಇರಬೇಕು. ನಮ್ಮ ಪರಂಪರೆಯ ಉಳಿವಿಗೆ ಭಗವತ್ಪ್ರೇರಣೆಯಿಂದ ಅರಸಿದ ವ್ಯಕ್ತಿಯನ್ನು ನಾವು ಇಲ್ಲಿ ಕಾಣಬಹುದು. ಶೂನ್ಯದಿಂದ ಪೂರ್ಣ ಉದಿಸಿಬರುವಲ್ಲಿ ಇಲ್ಲಿನ ವಿಷ್ಣು ದೇವರು ಆಯ್ಕೆ ಮಾಡಿದ ವ್ಯಕ್ತಿ. ತ್ಯಾಗ, ಕರ್ತವ್ಯ ಶೀಲತೆ, ನೈಪುಣ್ಯದಿಂದ ಇಲ್ಲಿನ ಕಾರ್ಯಗಳು ನಡೆಯುತ್ತಿರುವುದು ಸಂತಸದ ವಿಚಾರ. ಹೊಸ ಆಲೋಚನೆಗಳು, ಪ್ರೇರಣೆಗಳ ಮೂಲಕ ಇನ್ನಷ್ಟು ಉತ್ತಮ ಕಾರ್ಯಗಳು ಸದಾ ನಡೆಯುತ್ತಿರಲಿ. ಉತ್ತಮ ಕಾರ್ಯಗಳನ್ನು ನೋಡಿ ತಾನೂ ಮಾಡಬೇಕೆನ್ನುವ ಮನಸ್ಸು ಆತನಲ್ಲಿ ಮೂಡಿಬರಬೇಕು ಎಂದರು.
ಗೋಕುಲಂ ಗೋಶಾಲೆಯ ವಿಷ್ಣು ಪ್ರಸಾದ ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವಿದ್ವಾಂಸ ಡಾ. ಕೆ.ಎಲ್.ಶಂಕರನಾರಾಯಣ ಜೋಯಿಸ್, ಮಾಜಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಸವಿತಾ ರಾಮಮೂರ್ತಿ, ವಕೀಲ ಶೆಂಕೋಟಿ ದಾಸ್, ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು, ಕುಳಲ್‍ಮಂದಂ ರಾಮಕೃಷ್ಣನ್, ಪದ್ಮನಾಭ ನಾರಾಯಣನ್ ಪಟ್ಟೇರಿ, ಡಿವೈಎಸ್‍ಪಿ ಬಾಲಕೃಷ್ಣನ್, ಮಾಜಿ ಶಾಸಕ ಕುಂಞÂರಾಮನ್ ಮತ್ತಿತರು ಮಾತನಾಡಿದರು. ಸಭಾಕಾರ್ಯಕ್ರಮಕ್ಕೆ ಮೊದಲು ಗುರುಸ್ಮರಣೆಯೊಂದಿಗೆ ಪರಂಪರಾ ಭಜನಾ ಸಂಘ ರಂಗಪ್ರವೇಶ, ಭಜನೆ ನಡೆಯಿತು. ದೀಪಾವಳಿ ಸಂಗೀತೋತ್ಸವದಲ್ಲಿ ಅನೇಕ ಬಾಲ ಕಲಾವಿದರು, ದೇಶದ ಪ್ರಸಿದ್ಧ ಸಂಗೀತಗಾರರು ತಮ್ಮ ಸಂಗೀತ ಸೇವೆಯನ್ನು ನೀಡಿದ್ದರು. ಗೋಶಾಲೆಯಲ್ಲಿಯೇ ನಡೆಯುತ್ತಿರುವ ಸಂಗೀತವನ್ನು ಗೋವುಗಳು ಆಸ್ವಾದಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿ ಕಂಡುಬಂತು.
ಭÀಗವನ್ಮಾರ್ಗವನ್ನು ತೆರೆದುಕೊಡುವ ಪುಣ್ಯಭೂಮಿ ಭಾರತ: ರಾಘವೇಶ್ವರ ಶ್ರೀ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ದೀಪಾವಳಿ ಸಂಗೀತೋತ್ಸವದ ಸಭಾ ಕಾರ್ಯಕ್ರಮ
0
ಅಕ್ಟೋಬರ್ 31, 2022