ವಾಷಿಂಗ್ಟನ್: ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ Binance ಅನ್ನು ಹ್ಯಾಕ್ ಮಾಡಲಾಗಿದ್ದು, ಇದರಿಂದ ಸುಮಾರು 100 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
Binance Smart Chain blockchain ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಂಪನಿಯು ವಹಿವಾಟುಗಳನ್ನು ಮತ್ತು ಹಣದ ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ Binance ಸಿಇಒ ಚಾಂಗ್‌ಪೆಂಗ್ ಝಾವೊ ಅವರು, 'ಸಮಸ್ಯೆ ಈಗ ಎದುರಾಗಿದೆ. ನಿಮ್ಮ ನಿಧಿಗಳು (ಹಣ) ಸುರಕ್ಷಿತವಾಗಿವೆ. ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಹೆಚ್ಚಿನ ನವೀಕರಣಗಳನ್ನು ಒದಗಿಸುತ್ತೇವೆ. ಶೀಘ್ರ ಸಮಸ್ಯೆ ಬಗೆಹರಿಸಿ ಸಾಮಾನ್ಯವಹಿವಾಟಿಗೆ ಹಿಂದುರುಗುತ್ತೇವೆ ಎಂದು ತಿಳಿಸಿದ್ದಾರೆ.
Binance ಹ್ಯಾಕಿಂಗ್ ವಿಚಾರ ಇದೀಗ ಜಗತ್ತಿನ ಆರ್ಥಿಕ ವಿಭಾಗವನ್ನು ತಲ್ಲಣಗೊಳಿಸಿದ್ದು, ಈ ಕುರಿತು ಜಾಗತಿಕ ಆರ್ಥಿಕ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದು, ಹಾಲಿ ಹ್ಯಾಕಿಂಗ್ ನಿಂದ Binance ಸಂಸ್ಥೆಗೆ ಸುಮಾರು $100 ಮಿಲಿಯನ್ ನಿಂದ $110 ಮಿಲಿಯನ್ ಹಣ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ. ಅಂತೆಯೇ ಹ್ಯಾಕಿಂಗ್ ಬಳಿಕ ಸಂಸ್ಥೆಯು ಸರಿಸುಮಾರು $7 ಮಿಲಿಯನ್ ಹಣವನ್ನು ಫ್ರೀಜ್ ಮಾಡಿಡೆ ಎಂದು ಹೇಳಲಾಗಿದೆ.
ಕಳೆದ ವರ್ಷ ಬಿನಾನ್ಸ್ ಜಾಗತಿಕ ನಿಯಂತ್ರಕರು ಕ್ರಿಪ್ಟೋ ಮಾರುಕಟ್ಟೆಗಳಿಗೆ ನಿಯಮಗಳನ್ನು ಸ್ಥಾಪಿಸುವ ಸಮಯ ಎಂದು ಹೇಳಿತ್ತು. ಕ್ರಿಪ್ಟೋ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರನ್ನು ರಕ್ಷಿಸಲು ಮತ್ತು ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ಬಾಧ್ಯತೆಯನ್ನು ಹೊಂದಿದ್ದು, ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಮಾನದಂಡಗಳನ್ನು ಹೊಂದಿಸಲು ನಿಯಂತ್ರಕರು ಮತ್ತು ನೀತಿ ನಿರೂಪಕರೊಂದಿಗೆ ಕೆಲಸ ಮಾಡುವ ಜವಾಬ್ದಾರಿಯನ್ನು ಕಂಪನಿಯು ಆ ಸಮಯದಲ್ಲಿ ಒಪ್ಪಿಕೊಂಡಿತು.
ಕ್ರಿಪ್ಟೋ ಕರೆನ್ಸಿ ಮೇಲೆ ದಾಳಿ ಇದೇ ಮೊದಲೇನಲ್ಲ.. ಈ ಹಿಂದೆ ಸಾಕಷ್ಟು ಬಾರಿ ಕ್ರಿಪ್ಟೋ ಕರೆನ್ಸಿ ಸಂಸ್ಥೆಗಳನ್ನು ಹ್ಯಾಕ್ ಮಾಡಲಾಗಿತ್ತು. ಇದೇ ಆಗಸ್ಟ್‌ನಲ್ಲಿ 'ನೊಮಾಡ್' ಅನ್ನು ಹ್ಯಾಕರ್ ಗಳ ಹ್ಯಾಕ್ ಮಾಡಿದ್ದರು. ಇದರಿಂದ ಸುಮಾರು $200 ಮಿಲಿಯನ್ ನಷ್ಟವಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇನ್ನು ಜೂನ್‌ನಲ್ಲಿ ಹಾರ್ಮನಿ ಸಂಸ್ಥೆಯನ್ನು ಕೂಡ ಹ್ಯಾಕ್ ಮಾಡಿ, $100 ಮಿಲಿಯನ್ ನಷ್ಟವಾಗಿತ್ತು.