ಕೊಚ್ಚಿ: ಐಐಟಿಯಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳು ಬೋಧನಾ ಮಾಧ್ಯಮವಾಗಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸಮಿತಿಯು ಮಾಡಿರುವ ಶಿಫಾರಸುಗಳನ್ನು ಕೇರಳ ಸರ್ಕಾರ ವಿರೋಧಿಸಿದೆ.
'ಆರೆಸ್ಸೆಸ್‌ನ ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಭಾಷೆಯ ಪರಿಕಲ್ಪನೆಯನ್ನು ಜಾರಿಗೊಳಿಸುವ ಪ್ರಯತ್ನಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಇದು ಸಂವಿಧಾನದ ಆಶಯಗಳಿಗೆ ಮತ್ತು ದೇಶದ ಭಾಷಾ ವೈವಿಧ್ಯಕ್ಕೆ ವಿರುದ್ಧವಾದುದು' ಎಂದು ರಾಜ್ಯದ ಆಡಳಿತಾರೂಢ ಸಿಪಿಎಂ ಸೋಮವಾರ ಟ್ವೀಟ್ ಮಾಡಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿರುವ ಸಂಸದೀಯ ಸಮಿತಿಯ 11ನೇ ವರದಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವಾಗಿ ಹಿಂದಿ ಭಾಷಿಕ ಪ್ರದೇಶದಲ್ಲಿ ಹಿಂದಿಯನ್ನೂ, ಇತರ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯನ್ನೂ ಬಳಸಬೇಕು. ಇಂಗ್ಲಿಷ್ ಬಳಕೆ ಐಚ್ಛಿಕವಾಗಿರಬೇಕು. ಎಲ್ಲ ರಾಜ್ಯಗಳಲ್ಲಿಯೂ ಇಂಗ್ಲಿಷ್‌ಗಿಂತ ಸ್ಥಳೀಯ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದೂ ಶಿಫಾರಸು ಮಾಡಲಾಗಿದೆ.
'ದೇಶದ ವಿವಿಧತೆಯ ಮೇಲೆ ನಂಬಿಕೆ ಇಲ್ಲದ ಬಿಜೆಪಿ ದೇಶವನ್ನು ಆಳುತ್ತಿದೆ. ನೇಮಕಾತಿ ಪರೀಕ್ಷೆಗಳು ಹಿಂದಿಯಲ್ಲಿ ಮಾತ್ರ ಇರಬೇಕೆಂದು ಒತ್ತಾಯಿಸುವ ಮೂಲಕ ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಹಿಂದಿ ಭಾಷೆಯ ಜ್ಞಾನ ಕಡ್ಡಾಯವೆನ್ನುವ ಪೂರ್ವಭಾವಿ ಷರತ್ತು ವಿಧಿಸಲಾಗುತ್ತಿದೆ' ಎಂದು ಪಕ್ಷದ ಹಿರಿಯ ನಾಯಕ ಟಿ.ಎಂ. ಥಾಮಸ್ ಐಸಾಕ್ ಆರೋಪಿಸಿದ್ದಾರೆ.
ಭಾರತದ ವಿಶಿಷ್ಟ ಮತ್ತು ಶ್ರೀಮಂತ ಭಾಷಾ ವಿವಿಧತೆಯ ಮೇಲೆ ಆರೆಸ್ಸೆಸ್‌ನ ಹಿಂದಿ, ಹಿಂದೂ, ಹಿಂದೂಸ್ತಾನ್ ಕಲ್ಪನೆ ಹೇರುವುದು ಸ್ವೀಕಾರವಲ್ಲ. ದೇಶದ 22 ಅಧಿಕೃತ ಭಾಷೆಗಳಿಗೂ ಸಮಾನ ಸ್ಥಾನ ಸಿಗಬೇಕು
ಸೀತಾರಾಮ್ ಯೆಚೂರಿ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ
ಹಿಂದೆಯೇತರ ಭಾಷಿಗರಿಗೆ ಶಿಕ್ಷಣ, ಉದ್ಯೋಗ ನಿರಾಕರಿಸುವ ಕೇಂದ್ರದ ಈ ನಿರ್ಧಾರ ಅನೇಕ ಅಪಾಯಗಳಿಂದ ಕೂಡಿದೆ. ಇದು ಸಂವಿಧಾನಕ್ಕೆ ವಿರುದ್ಧವಾದುದು ಕೂಡ
ಜಾನ್ ಬ್ರಿಟಾಸ್, ರಾಜ್ಯಸಭೆ ಸದಸ್ಯ, ಸಿಪಿಎಂ
ಸಂಸದೀಯ ಸಮಿತಿಯ ಶಿಫಾರಸುಗಳನ್ನು ಒಪ್ಪಲಾಗದು. ಬಿಜೆಪಿಯು ದೇಶದ ಬಹುತ್ವವನ್ನು ತಿರಸ್ಕರಿಸುತ್ತಿದೆ. ರಾಷ್ಟ್ರದ ಏಕತೆಯು ವಿವಿಧತೆಯಿಂದ ಕೂಡಿದೆ ಎನ್ನುವುದನ್ನು ಅದು ಒಪ್ಪಿಕೊಳ್ಳುತ್ತಿಲ್ಲ
ವಿ.ಪಿ. ಸಾನು, ಅಧ್ಯಕ್ಷರು, ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ