ನವದೆಹಲಿ: ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಡಿಎಂಕೆ ಮುಖಂಡ ಎ. ರಾಜಾ ಅವರು ₹ 5.53 ಕೋಟಿಯಷ್ಟು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಾ ಅವರ ನಿಕಟವರ್ತಿಯಾಗಿದ್ದ ಸಿ. ಕೃಷ್ಣಮೂರ್ತಿ ಎಂಬುವವರು 2007ರ ಜನವರಿಯಲ್ಲಿ ಕೋವೈ ಶೆಲ್ಟರ್ಸ್ ಪ್ರಮೋಟರ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ಅದೇ ವರ್ಷ ಫೆಬ್ರುವರಿಯಲ್ಲಿ ಗುರುಗ್ರಾಮ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದು ಕಾಂಚೀಪುರಂನಲ್ಲಿ ಜಮೀನು ಖರೀದಿಗೆಂದು ₹ 4.56 ಕೋಟಿ ಮೊತ್ತದ ಕಮಿಷನ್ ನೀಡಿತ್ತು ಎಂದೂ ಚೆನ್ನೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
ರಾಜಾ ಅವರು ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮೂಲಸೌಕರ್ಯ ಕಂಪನಿಯ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಈ ಕಮಿಷನ್ ಪಾವತಿಯಾಗಿತ್ತೇ ಹೊರತು ಭೂ ವ್ಯವಹಾರಕ್ಕಾಗಿ ಅಲ್ಲ. ರಿಯಲ್ ಎಸ್ಟೇಟ್ ಸಂಸ್ಥೆಯು ಉದ್ದೇಶಿತ ಭೂವ್ಯವಹಾರವನ್ನು ಹೊರತುಪಡಿಸಿ ಇತರ ಯಾವುದೇ ರೀತಿಯ ರಿಯಲ್ ಎಸ್ಟೇಟ್ ಚಟುವಟಿಕೆಯನ್ನು ನಡೆಸಿಲ್ಲ ಎಂದೂ ಸಿಬಿಐ ಆರೋಪಿಸಿದೆ.
ರಾಜಾ ಮತ್ತು ಅವರ ಸಂಬಂಧಿಕರು, ಆಪ್ತರು ಸೇರಿದಂತೆ ಒಟ್ಟು 16 ಜನರ ವಿರುದ್ಧ ಸಿಬಿಐ 2015ರಲ್ಲಿ ಪ್ರಕರಣ ದಾಖಲಿಸಿತ್ತು.