ನವದೆಹಲಿ: ರಸಗೊಬ್ಬರದ ಗುಣಮಟ್ಟ ಹಾಗೂ ಉತ್ಪಾದನಾ ತಂತ್ರಜ್ಞಾನದಲ್ಲಿ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿದೆ. ಈ ಬೆಳವಣಿಗೆ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪೂರಕವಾಗುತ್ತದೆ. ಜತೆಗೆ ಎಲ್ಲಾ ಕೃಷಿ ಬೆಳೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ.
ಶೀಘ್ರದಲ್ಲಿ ಭಾರತ ಜಾಗತಿಕವಾಗಿ ಕೃಷಿ ಉತ್ಪನ್ನಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯಲ್ಲಿ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್‍ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು.
ಕೃಷಿ ಕ್ಷೇತ್ರವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಹಾಗೂ ರೈತರನ್ನು ಸಬಲರನ್ನಾಗಿಸುವ ಸಲುವಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದಾದ್ಯಂತ ಇಂದು 600ಕ್ಕೂ ಅಧಿಕ ಪಿಎಂ ಕಿಸಾನ್ ಕೇಂದ್ರಗಳಿದ್ದು, ರಸಗೊಬ್ಬರ ಉತ್ಪಾದನಾ ಕೇತ್ರದಲ್ಲಿ ಭಾರತ ಪ್ರಭುತ್ವ ಸಾಧಿಸಲಿದೆ. ಪಿಎಂ ಕಿಸಾನ್ ಯೋಜನೆಯ ಮೂಲಕ ಈಗಾಗಲೇ ರೈತರಿಗೆ 16 ಸಾವಿರ ಕೋಟಿ ರೂ. ಮೌಲ್ಯದ 12ನೇ ಕಂತು ನೇರವಾಗಿ ಜಮೆ ಆಗಿದೆ ಎಂದು ತಿಳಿಸಿದರು.