ಕೇವಡಿಯಾ : ಹವಾಮಾನ ಬದಲಾವಣೆಯಿಂದಾಗಿ ಆಗುವ ವಿಪತ್ತುಗಳಿಂದ ಭೂಮಿಯನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ 'ಮಿಷನ್ ಲೈಫ್' ಎಂಬ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು.
ಇಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರು ಈ ಯೋಜನೆಗೆ ಚಾಲನೆ ನೀಡಿದರು.
ಮಿಷನ್ ಲೈಫ್' ಎಂಬುದು 'ಮಿಷನ್- ಲೈಫ್‌ಸ್ಟೈಲ್ ಫಾರ್ ಎನ್‌ವಿರಾನ್‌ಮೆಂಟ್' (ಪರಿಸರಕ್ಕಾಗಿ ಜೀವನಶೈಲಿ) ಎಂಬುದರ ಸಂಕ್ಷಿಪ್ತರೂಪ.ಈ ಕ್ರಿಯಾಯೋಜನೆಯನ್ನು ಎಲ್ಲ ರಾಷ್ಟ್ರಗಳು ಜಾರಿಗೊಳಿಸಲಿವೆ. ಮುಂದಿನ ತಿಂಗಳು ಈಜಿಪ್ಟ್‌ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ನಡೆಯಲಿದ್ದು, ಇದಕ್ಕೂ ಮುನ್ನವೇ ಈ ಯೋಜನೆಗೆ ಚಾಲನೆ ದೊರೆಯುವುದು ಗಮನಾರ್ಹಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, 'ಹವಾಮಾನ ಬದಲಾವಣೆಯಿಂದಾಗಿ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಭಾರತ ಬದ್ಧವಾಗಿದೆ. ಪ್ರತಿಯೊಬ್ಬರು ಹವಾಮಾನ ಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು' ಎಂದರು. 'ಕಡಿಮೆ ಬಳಕೆ, ಮರುಬಳಕೆ ಹಾಗೂ ಮರುಸಂಸ್ಕರಣೆ ಎಂಬ ಸೂತ್ರವನ್ನು ಪ್ರತಿಯೊಬ್ಬ ಪ್ರಜೆಯೂ ಪಾಲಿಸಬೇಕು. ನಮ್ಮ ಭೂಮಿಯನ್ನು ಹೆಚ್ಚು ಜನಸ್ನೇಹಿಯನ್ನಾಗಿ ಮಾಡುವ ಪರಿಕಲ್ಪನೆಯನ್ನು ಮಿಷನ್ ಲೈಫ್ ಹೊಂದಿದೆ. ಸುಸ್ಥಿರ ಅಭಿವೃದ್ಧಿಗಾಗಿ ಜನರು ಸಾಂಘಿಕ ಪ್ರಯತ್ನ ನಡೆಸಬೇಕು ಎಂಬುದನ್ನು ಈ ಯೋಜನೆ ಪ್ರತಿಪಾದಿಸುತ್ತದೆ' ಎಂದೂ ಹೇಳಿದರು.
'ಪರಿಸರ ಸ್ನೇಹಿ ಇಂಧನ ಮೂಲ ಬಳಕೆಗೆ ಭಾರತ ಒತ್ತು ನೀಡುತ್ತಿದೆ. ಜಲಜನಕವನ್ನು ಇಂಧನವಾಗಿ ಬಳಸಬೇಕು ಎಂಬ ಪ್ರಯತ್ನದ ಭಾಗವಾಗಿ ರಾಷ್ಟ್ರೀಯ ಜಲಜನಕ ಮಿಷನ್‌ಗೆ ಚಾಲನೆ ನೀಡಲಾಗಿದೆ' ಎಂದು ಮೋದಿ ಹೇಳಿದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಇದ್ದರು.