ಜೈಪುರ: ಪಾಕಿಸ್ತಾನಕ್ಕೆ ಭಾರತ ಸೇನೆಯ ರಕ್ಷಣಾ ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಅಧಿಕಾರಿ ರವಿ ಪ್ರಕಾಶ್ ಮೀನಾ ಅವರಿಗೆ ತಾನು ಪ್ರೀತಿಸುತ್ತಿದ್ದ ಮಹಿಳೆ ಪಾಕ್ ಗೂಢಚಾರಿ ಎಂಬುದನ್ನು ನಂಬಲು ಈಗಲೂ ಸಾಧ್ಯವಾಗಿಲ್ಲ. ಅವರು ಪ್ರೀತಿಯಲ್ಲಿ ಹುಚ್ಚರಾಗಿದ್ದರು ಎಂದು ಗುಪ್ತಚರ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೋತರ ನಿವಾಸಿಯಾಗಿರುವ 31 ವರ್ಷದ ರವಿ ಪ್ರಕಾಶ್ ಅವರನ್ನು ಅಕ್ಟೋಬರ್ ಮೊದಲ ವಾರದಲ್ಲಿ ಬಂಧಿಸಲಾಗಿತ್ತು. ಹನಿಟ್ರ್ಯಾಪ್‌ಗೆ ಒಳಗಾಗಿ ಭಾರತ ಸೇನೆಯ ರಾಜತಾಂತ್ರಿಕ ಮಾಹಿತಿ ಹಂಚಿಕೊಂಡಿರುವ ಆರೋಪ ದೆಹಲಿಯ ಸೇನಾ ಭವನದ ಶ್ರೇಣಿ 4ರ ಅಧಿಕಾರಿ ಮೇಲಿದೆ.
ಐಎಸ್‌ಐನ ಏಜೆಂಟ್‌ಗಳು ಸೇರಿದಂತೆ ಪಾಕಿಸ್ತಾನಿ ಏಜೆಂಟ್‌ಗಳು ನಡೆಸುತ್ತಿರುವ ಹನಿಟ್ರ್ಯಾಪ್‌ಗೆ ಬಿದ್ದು ಸೇನೆ ಮಾಹಿತಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿ 2017ರಿಂದ ಇಲ್ಲಿಯ ವರೆಗೆ ರವಿ ಪ್ರಕಾಶ್ ಸೇರಿದಂತೆ 35 ಮಂದಿಯನ್ನು ಬಂಧಿಸಲಾಗಿದೆ.
' ರವಿ ಪ್ರಕಾಶ್ ಅವರಿಗೆ ಪಾಕಿಸ್ತಾನಿ ಏಜೆಂಟ್ ಅಂಜಲಿ ತಿವಾರಿ ಎಂಬ ಹೆಸರಿನೊಂದಿಗೆ ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಭಾರತೀಯ ಸೇನೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನು ನಂಬಿದ ರವಿ ಪ್ರಕಾಶ್ ಅವರು ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದೀಗ ಬಂಧನಕ್ಕೆ ಒಳಗಾದ ನಂತರವೂ ಆ ಮಹಿಳೆ ಪಾಕಿಸ್ತಾನದ ಏಜೆಂಟ್ ಎಂಬುದನ್ನು ನಂಬಲು ತಯಾರಿಲ್ಲ' ಎಂದು ತನಿಖಾ ತಂಡದ ಸಮೀಪವರ್ತಿ ಆಗಿರುವ ಅಧಿಕಾರಿ ಹೇಳಿದ್ದಾರೆ.
ಅಕ್ಟೋಬರ್ 8ರಂದು ರವಿ ಪ್ರಕಾಶ್ ಮೀನಾ ಅವರನ್ನು ಬಂಧಿಸಲಾಗಿದೆ. ಅವರು ಪಾಕಿಸ್ತಾನಿ ಏಜೆಂಟ್ ಮಹಿಳೆಯ ಜೊತೆಗೆ ರಹಸ್ಯ ಮತ್ತು ರಾಜತಾಂತ್ರಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು ಎಂದು ರಾಜಸ್ಥಾನದ ಡಿಜಿಪಿ ಉಮೇಶ್ ಮಿಶ್ರಾ ತಿಳಿಸಿದ್ದಾರೆ.
ಮಾಹಿತಿ ಹಂಚಿಕೆಗೆ ಪ್ರತಿಯಾಗಿ ರವಿ ಪ್ರಕಾಶ್ ಅವರ ಬ್ಯಾಂಕ್ ಖಾತೆಗೆ ದುಡ್ಡು ಬಂದಿರುವುದಾಗಿಯೂ ಮಿಶ್ರಾ ಅವರು ಹೇಳಿದ್ದಾರೆ. ಸದ್ಯ ರವಿ ಪ್ರಕಾಶ್ ಅವರನ್ನು ಅಧಿಕೃತ ರಹಸ್ಯ ಮಾಹಿತಿ ಕಾಯ್ದೆ ಅಡಿ ಬಂಧಿಸಲಾಗಿದೆ.