HEALTH TIPS

ಉಗ್ರರಿಂದ ತಂತ್ರಜ್ಞಾನ ದುರ್ಬಳಕೆ: ಸಚಿವ ಜೈಶಂಕರ್ ಕಳವಳ

 

             ನವದೆಹಲಿ: ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಮುಕ್ತ ಸಮಾಜದ ನಿಲುವುಗಳನ್ನು ಭಯೋತ್ಪಾದಕ ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಕಳವಳವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ವ್ಯಕ್ತಪಡಿಸಿದ್ದಾರೆ.

             ಭಯೋತ್ಪಾದಕ ಸಂಘಟನೆಗಳು, ಉಗ್ರಗಾಮಿ ಸಿದ್ಧಾಂತದ ಬಗ್ಗೆ ಸಹಾನುಭೂತಿ ಹೊಂದಿರುವ ವ್ಯಕ್ತಿಗಳು ಹಾಗೂ ಯಾರ ಬೆಂಬಲವೂ ಇಲ್ಲದ ಏಕಾಂಗಿ ದಾಳಿಕೋರರು (ಲೋನ್ ವೂಲ್ಫ್) ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯ ಮೇಲೆ ಪ್ರಭುತ್ವ ಸಾಧಿಸಿರುವುದು ಕಳವಳಕಾರಿ ಎಂದು ಅವರು ಹೇಳಿದ್ದಾರೆ.

              'ತಂತ್ರಜ್ಞಾನ, ಹಣ ಹಾಗೂ ಇದಕ್ಕಿಂತ ಮುಖ್ಯವಾಗಿ ವಿವಿಧ ದೇಶಗಳ ಮುಕ್ತ ಸಿದ್ಧಾಂತಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅವರು, ಸ್ವಾತಂತ್ರ್ಯ, ಸಹಿಷ್ಣುತೆ ಹಾಗೂ ಪ್ರಗತಿಯ ಮೇಲೆ ದಾಳಿ ಎಸಗುತ್ತಾರೆ' ಎಂದು ಅವರು ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಅವರು ಶನಿವಾರ ಮಾತನಾಡಿದರು.

                 ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ನಿಧಿಗೆ ಭಾರತವು ಈ ವರ್ಷ ಸ್ವಯಂ ಪ್ರೇರಣೆಯಿಂದ 5 ಲಕ್ಷ ಡಾಲರ್ (₹4.1 ಕೋಟಿ) ನೀಡಲಿದೆ ಎಂದು ಜೈಶಂಕರ್ ಇದೇ ವೇಳೆ ಪ್ರಕಟಿಸಿದರು. ಭಯೋತ್ಪಾದನೆಯ ಸವಾಲುಗಳನ್ನು ಎದುರಿಸಲು ಸದಸ್ಯ ದೇಶಗಳಿಗೆ ಬಲ ತುಂಬುವುದು ಈ ನೆರವಿನ ಉದ್ದೇಶ.

                 ಭಯೋತ್ಪಾದನಾ ಸಂಘಟನೆಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಪಾಯ ಒಡ್ಡುವುದನ್ನು ತಡೆಯುವುದು ಎಲ್ಲ ಸರ್ಕಾರಗಳಿಗೂ ಸವಾಲಾಗಿದೆ ಎಂದು ಜೈಶಂಕರ್ ಹೇಳಿದರು.

              ಉಗ್ರರು ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಇಂಟರ್‌ನೆಟ್ ಹಾಗೂ ಸಾಮಾಜಿಕ ಜಾಲತಾಣಗಳು ಪ್ರಬಲ 'ಟೂಲ್‌ಕಿಟ್' ರೀತಿ ಬಳಕೆಯಾಗುತ್ತಿವೆ ಎಂದು ಜೈಶಂಕರ್ ಎಚ್ಚರಿಸಿದರು. ತಮ್ಮ ಕಾರ್ಯಸೂಚಿ ಪಸರಿಸಲು, ತೀವ್ರವಾದವನ್ನು ವಿಸ್ತರಿಸಲು ಮತ್ತು ಸಮಾಜಗಳನ್ನು ಅಸ್ಥಿರಗೊಳಿಸುವ ಸಂಚು ರೂಪಿಸಲು ಉಗ್ರರು ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

                 ಶುಕ್ರವಾರ ಇದೇ ವೇದಿಕೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲ ಸ್ವರೂಪದ ನಕ್ಸಲ್‌ವಾದವನ್ನು ಸೋಲಿಸಬೇಕಿದೆ ಎಂದು ಕರೆ ನೀಡಿದ್ದರು. ಸಮಾವೇಶದ ಕೊನೆಯ ದಿನವಾದ ಶನಿವಾರ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸದಸ್ಯ ದೇಶಗಳ ಆದ್ಯತೆಗಳನ್ನು ಪಟ್ಟಿ ಮಾಡಿರುವ 'ದೆಹಲಿ ಘೋಷಣೆ'ಯನ್ನು ಅಂಗೀಕರಿಸಲಾಯಿತು.

                                        ಪ್ರಜಾಪ್ರಭುತ್ವವಾದಿ ಸರ್ಕಾರಗಳಿಗೆ ಎಚ್ಚರಿಕೆ:

               ಭಯೋತ್ಪಾದಕರು ಹಾಗೂ ಅವರ ಬೆಂಬಲಿಗರಿಂದ ಸ್ವಾತಂತ್ರ್ಯವು ದುರ್ಬಳಕೆ ಆಗುವ ಸಾಧ್ಯತೆಯ ಬಗ್ಗೆ ಮೋದಿ ನೇತೃತ್ವದ ಸರ್ಕಾರವು ಜಗತ್ತನ್ನು ಎಚ್ಚರಿಸುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಹಿನ್ನಡೆ ಕಾಣುತ್ತಿವೆ ಎಂಬ ಅರ್ಥದಲ್ಲಿ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ಅಭಿಪ್ರಾಯಪಟ್ಟಿವೆ ಎಂದು ಗ್ರಹಿಸಿರುವ ಭಾರತ, ಈ ತಿರುಗೇಟು ನೀಡಿದೆ.

                        ಇದೇ ತಿಂಗಳು ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದ ಜೈಶಂಕರ್ ಅವರು, ಪ್ರಜಾಪ್ರಭುತ್ವವಾದಿ ದೇಶಗಳು ನಂಬಿರುವ ಸ್ವಾತಂತ್ರ್ಯದ ಸಿದ್ಧಾಂತವು ದುರ್ಬಳಕೆಗೆ ಒಳಗಾಗುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದರು.

                             ತಂತ್ರಜ್ಞಾನ ದುರ್ಬಳಕೆ ಕುರಿತು ಹೇಳಿದ್ದೇನು?

*ಕಳೆದ ಎರಡು ದಶಕಗಳಲ್ಲಿ ವರ್ಚುವಲ್ ಪ್ರೈವೆಟ್ ನೆಟ್‌ವರ್ಕ್ (ವಿಪಿಎನ್), ಎನ್‌ಕ್ರಿಪ್ಟೆಡ್ ಮೆಸೇಜ್ ವ್ಯವಸ್ಥೆ, ಬ್ಲಾಕ್‌ಚೈನ್ ಮತ್ತು ಡಿಜಿಟಲ್ ಕರೆನ್ಸಿ ತಂತ್ರಜ್ಞಾನಗಳು ಅಗಾಧವಾಗಿ ಬೆಳೆದಿವೆ. ಇವು ಮಾನವನ ಭವಿಷ್ಯಕ್ಕೆ ದೊಡ್ಡ ಕೊಡುಗೆ ನೀಡುವ ಹಾದಿಯಲ್ಲಿ ಸಾಗುತ್ತಿವೆ. ಆದರೆ, ಇದೇ ನಾಣ್ಯದ ಮತ್ತೊಂದು ಮಗ್ಗುಲಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಇದೇ ತಂತ್ರಜ್ಞಾನಗಳನ್ನು ಬಳಸಿಕೊಂಡು ನಡೆಯುತ್ತಿವೆ ಎಂಬುದರ ಅರಿವು ನಮಗಿರಬೇಕು

*ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಡ್ರೋನ್ ತಂತ್ರಜ್ಞಾನ ಹಾಗೂ ಕ್ವಾಡ್‌ಕಾಪ್ಟರ್‌ಗಳನ್ನು ಬಳಸಿಕೊಂಡು ಗಡಿಯಾಚೆಗೆ ಮಾದಕವಸ್ತುಗಳು ಹಾಗೂ ಶಸ್ತ್ರಾಸ್ತ್ರ ರವಾನಿಸಿ ವಿಧ್ವಂಸಕ ಕೃತ್ಯ ಎಸಗುತ್ತಿವೆ

*ಪರೋಕ್ಷವವಾಗಿ ಪಾಕಿಸ್ತಾನವನ್ನು ಉಲ್ಲೇಖಿಸಿದ ಜೈಶಂಕರ್, ಭಾರತ ಮಾತ್ರವಲ್ಲದೇ ಇತರ ದೇಶಗಳಿಗೆ ಡ್ರೋನ್‌ಗಳು ಅಪಾಯಕಾರಿಯಾಗಿವೆ ಎಂದರು

*ಆಫ್ರಿಕಾದಲ್ಲಿ ಭದ್ರತಾಪಡೆಗಳು ಹಾಗೂ ವಿಶ್ವಸಂಸ್ಥೆ ಶಾಂತಿಸಮಿತಿ ಸದಸ್ಯರ ಓಡಾಟದ ಮೇಲೆ ಭಯೋತ್ಪಾದಕರು ಡ್ರೋನ್ ಮೂಲಕ ನಿಗಾ ವಹಿಸಿದ್ದರು

*ಯುಎಇ ಹಾಗೂ ಸೌದಿ ಅರೇಬಿಯಾದಲ್ಲಿ ನಾಗರಿಕರನ್ನು ಗುರಿಯಾಗಿಸಿ ಕೆಲವು ತಿಂಗಳು ಹಿಂದೆ ಭಯೋತ್ಪಾಕದರು ಗಡಿಯಾಚೆಯಿಂದ ಡ್ರೋನ್ ದಾಳಿ ನಡೆಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries