ಪುದುಚೇರಿ: ತಮಿಳು ಮಾಧ್ಯಮದಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಬೋಧಿಸುವ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಮಂಗಳವಾರ ಹೇಳಿದ್ದಾರೆ.
ಹಿರಿಯ ನಾಗರಿಕರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳು ಮಾಧ್ಯಮದಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಬೋಧಿಸುವ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮುಖ್ಯಮಂತ್ರಿ ರಂಗಸಾಮಿ ಅವರೊಂದಿಗೆ ಚರ್ಚಿಸಲಾಗುವುದು. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಮಿಳು ಭಾಷೆಯಲ್ಲಿ ಪಠ್ಯಪುಸ್ತಕ ರೂಪಿಸಲು ಸಮಿತಿಯೊಂದನ್ನು ರಚಿಸಲಾಗುವುದು' ಎಂದು ತಿಳಿಸಿದರು.
'ಪ್ರಧಾನಿ ನರೇಂದ್ರ ಮೋದಿ ಅವರಾಗಲೀ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಾಗಲೀ ಜನರ ಮೇಲೆ ಯಾವುದೇ ಭಾಷೆಯನ್ನು ಹೇರುತ್ತಿಲ್ಲ. ಮಾತೃಭಾಷೆಯಲ್ಲಿ ಬೋಧಿಸುವ ವೃತ್ತಿಪರ ಕಾಲೇಜು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಾಯವಾಗುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ' ಎಂದೂ ತಿಳಿಸಿದರು.
ಸರ್ಕಾರಿ ಸ್ವಾಮ್ಯದ ಹಾಲು ಉತ್ಪಾದಕರ ಸಹಕಾರಿ ಸಂಸ್ಥೆಯಲ್ಲಿನ ಹಾಲು ಕೊರತೆಯ ಕುರಿತು ಮಾತನಾಡಿದ ಅವರು, ಸ್ಥಳೀಯ ಹಾಲು ಉತ್ಪಾದನೆಯ ಜತೆಗೆ ಕರ್ನಾಟಕದಿಂದ ಪ್ರತಿದಿನ 1.5 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಆ ರಾಜ್ಯದಲ್ಲಿನ ಹಾಲಿನ ಲಭ್ಯತೆಯಲ್ಲಿ ಕೊರತೆಯಿದೆ' ಎಂದು ಹೇಳಿದ್ದಾರೆ.