ಭರೂಚ್: 'ಅರ್ಬನ್ ನಕ್ಸಲರು' ತಮ್ಮ ನೋಟವನ್ನು ಬದಲಿಸಿಕೊಳ್ಳುವ ಮೂಲಕ ಗುಜರಾತ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ರಾಜ್ಯವು ಯುವಕರ ಜೀವನವನ್ನು ನಾಶಮಾಡಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ದೇಶದ ಮೊದಲ ಬೃಹತ್ ಡ್ರಗ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರಧಾನಿ ಮಾತನಾಡಿದರು.
'ಅರ್ಬನ್ (ನಗರ) ನಕ್ಸಲರು ಹೊಸ ರೂಪದೊಂದಿಗೆ ರಾಜ್ಯ ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ಅವರು ತಮ್ಮ ವೇಷಭೂಷಣಗಳನ್ನು ಬದಲಾಯಿಸಿದ್ದಾರೆ. ಅವರನ್ನು ಅನುಸರಿಸಲು ನಮ್ಮ ಮುಗ್ಧ ಮತ್ತು ಶಕ್ತಿಯುತ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ' ಎಂದು ಮೋದಿ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗುಜರಾತ್‌ಗೆ ಕಾಲಿಡಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಮೇಲೆ ಮುಸುಕಿನ ದಾಳಿ ನಡೆಸಿದರು.
ಅರ್ಬನ್ ನಕ್ಸಲರು ಮೇಲಿಂದ ಮೇಲೆ ಕಾಲಿಡುತ್ತಿದ್ದಾರೆ. ನಮ್ಮ ಯುವ ಪೀಳಿಗೆಯನ್ನು ನಾಶಮಾಡಲು ನಾವು ಬಿಡುವುದಿಲ್ಲ. ದೇಶವನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿರುವ ಅರ್ಬನ್ ನಕ್ಸಲರ ವಿರುದ್ಧ ನಮ್ಮ ಮಕ್ಕಳಿಗೆ ಎಚ್ಚರಿಕೆ ನೀಡಬೇಕು. ಅವರು ವಿದೇಶಿ ಶಕ್ತಿಗಳ ಏಜೆಂಟ್. ಗುಜರಾತ್ ಅವರ ವಿರುದ್ಧ ತಲೆ ಕೆಡಿಸಿಕೊಳ್ಳುವುದಿಲ್ಲ, ಗುಜರಾತ್ ಅವರನ್ನು ನಾಶಪಡಿಸುತ್ತದೆ ಎಂದು ಹೇಳಿದರು.
2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತದ ಆರ್ಥಿಕತೆಯು ವಿಶ್ವದಲ್ಲಿ 10 ನೇ ಸ್ಥಾನದಲ್ಲಿತ್ತು ಮತ್ತು ಅದು ಈಗ ಐದನೇ ಸ್ಥಾನಕ್ಕೆ ಬಂದಿದೆ ಎಂದು ಮೋದಿ ಹೇಳಿದರು.