ಡೆಹ್ರಾಡೂನ್: ಪೋರ್ಟಲ್‌ಗಳು ತೆರೆದಾಗಿನಿಂದ ಚಾರ್ ಧಾಮ್ ಯಾತ್ರೆಗೆ 45 ಲಕ್ಷ ಯಾತ್ರಾರ್ಥಿಗಳ ಆಗಮನವಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ಕಡಿಮೆಯಾಗುತ್ತಿದ್ದಂತೆಯೇ ಈ ಬಾರಿ ಕೇದಾರನಾಥ ಹಾಗೂ ಬದ್ರಿನಾಥಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
ಬದ್ರಿನಾಥ ದೇವಾಲಯದ ಬಾಗಿಲು ನವೆಂಬರ್ 19ರಂದು ಮುಚ್ಚಲಾಗುತ್ತಿದ್ದು, ಕೇದಾರನಾಥ ಕ್ಷೇತ್ರದ ದರ್ಶನ ಅಕ್ಟೋಬರ್ 27ರಂದು ಮುಚ್ಚಲಾಗಿದೆ. ಇನ್ನು ಗಂಗೋತ್ರಿ ಅಕ್ಟೋಬರ್ 26ರಂದು ಮತ್ತು ಯಮುನೋತ್ರಿಯ ಬಾಗಿಲನ್ನು ಅ. 27ರಂದು ಮುಚ್ಚಲಾಗಿದೆ.
ಈ ನಡುವೆ ಚಾರ್ ಧಾಮ್ ಯಾತ್ರೆಯ ಲಾಭ-ನಷ್ಟಗಳನ್ನು ಲೆಕ್ಕ ಹಾಕಲಾಗಿದ್ದು, ಈ ಬಾರಿ ಹೆಲಿಕಾಪ್ಟರ್ ಕಂಪನಿಗಳಿಗಿಂತಲೂ ಕುದುರೆ-ಕತ್ತೆ ಮತ್ತು ಡೋಲಿ ಮಾಲೀಕರು ಹೆಚ್ಚು ಲಾಭ ಗಳಿಸಿರುವುದು ಕಂಡು ಬಂದಿದೆ. ಯಾತ್ರೆಯ ಒಟ್ಟಾರೆ 211 ಕೋಟಿ ರೂ. ಆದಾಯದಲ್ಲಿ ಕುದುರೆ, ಕತ್ತೆ ಮತ್ತು ಡೋಲಿ ಮಾಲೀಕರಿಂದಲೇ ರೂ.109.98 ಕೋಟಿ ಆದಾಯ ಬಂದಿದೆ ಎಂದು ತಿಳಿದುಬಂದಿದೆ.
ಬದರಿ-ಕೇದಾರ ದೇವಸ್ಥಾನ ಸಮಿತಿಯ ಪ್ರಕಾರ ಕುದುರೆ-ಕತ್ತೆ ಮತ್ತು ಡೋಲಿ (ದಂಡಿ-ಕಂಡಿ) ನಿರ್ವಾಹಕರಿಂದ ಸರ್ಕಾರವು ಸುಮಾರು 8 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ ಎಂದು ತಿಳಿದುಬಂದಿದೆ.
ಈ ಬಾರಿ, ಆಡಳಿತವು ಯಾತ್ರೆಯ ಸಮಯದಲ್ಲಿ ಸುಮಾರು 15,000 ಕುದುರೆ ಮತ್ತು ಕತ್ತೆ ಮಾಲೀಕರನ್ನು ನೋಂದಾಯಿಸಿದ್ದು, ಸುಮಾರು 5.34 ಲಕ್ಷ ಯಾತ್ರಾರ್ಥಿಗಳು ಕುದುರೆ ಮತ್ತು ಹೇಸರಗತ್ತೆ ಸವಾರಿ ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದರು. ಯಮುನೋತ್ರಿಯಲ್ಲಿ ನೋಂದಣಿ ಮಾಡಿಕೊಂಡಿದ್ದ ನಿರ್ವಾಹಕರು 21 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆಂದು ಸಮಿತಿ ತಿಳಿಸಿದೆ.
ಇತ್ತೀಚೆಗಷ್ಟೇ ಉತ್ತರಾಖಂಡ್'ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು, ಜನರು ತಮ್ಮ ಯಾತ್ರೆಯ ಬಜೆಟ್‌ನ ಕನಿಷ್ಠ ಶೇ.5ರಷ್ಟು ಹಣವನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಖರ್ಚು ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು.ಬದ್ರಿ ಕೇದಾರ್ ದೇವಾಲಯ ಸಮಿತಿಯ ಅಧ್ಯಕ್ಷ ಅಜಯೇಂದ್ರ ಅಜಯ್ ಮಾತನಾಡಿ, "ಈ ಬಾರಿಯ ಉದ್ಯಮಿಗಳ ಲಾಭವನ್ನು ನೋಡಿದರೆ, ಮುಂದಿನ ಯಾತ್ರೆಯು ಅಭೂತಪೂರ್ವವಾಗಿರುತ್ತದೆ ಮತ್ತು ಪ್ರಧಾನಿ ಕನಸು ನನಸಾಗುತ್ತದೆ ಎಂದೆನಿಸುತ್ತಿದೆ ಎಂದು ಹೇಳಿದ್ದಾರೆ.
ಗರ್ವಾಲ್ ಮಂಡಲ್ ವಿಕಾಸ್ ನಿಗಮ್‌ನ ವ್ಯವಸ್ಥಾಪಕ ನಿರ್ದೇಶಕ ಬನ್ಶಿಧರ್ ತಿವಾರಿ ಮಾತನಾಡಿ, ಈ ಬಾರಿ ನಿಗಮವು 50 ಕೋಟಿ ರೂಪಾಯಿ ಗಳಿಸುವ ಅಂದಾಜಿದೆ. ಯಾತ್ರೆಗೆ ಸಂಬಂಧಿಸಿದ ಟ್ಯಾಕ್ಸಿ ವ್ಯಾಪಾರಿಗಳು ಹಿಂದಿನ ವರ್ಷಗಳ ಸರಾಸರಿ ಆದಾಯಕ್ಕಿಂತ ಈ ಬಾರಿ ಮೂರು ಪಟ್ಟು ಹೆಚ್ಚು ವ್ಯವಹಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಯಾತ್ರೆಯ ಮಾರ್ಗದಲ್ಲಿರುವ ಎಲ್ಲಾ ಹೋಟೆಲ್‌ಗಳು, ಹೋಂಸ್ಟೇಗಳು, ಲಾಡ್ಜ್‌ಗಳು ಮತ್ತು ಧರ್ಮಶಾಲಾಗಳು ಆರು ತಿಂಗಳ ಬುಕ್ಕಿಂಗ್‌ಗಳನ್ನು ಹೊಂದಿದ್ದವು. ಹಿಂದಿನ ವರ್ಷಗಳಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸಿದ್ದ ಜಿಎಂವಿಎನ್ ಈ ವರ್ಷದ ಆಗಸ್ಟ್‌ವರೆಗೆ ರೂ 40 ಕೋಟಿ ಗಳಿಸಿದೆ ಎಂದು ತಿವಾರಿ ಮಾಹಿತಿ ನೀಡಿದ್ದಾರೆ.