ಕೋಲ್ಕತ್ತ: 'ಕಾನೂನು ಶಾಲೆಗಳಿಂದ ಉತ್ತೀರ್ಣರಾಗಿ ಹೊರಬರುವ ಪದವೀಧರರು ಸಮಾಜ ಮತ್ತು ಮನುಕುಲದ ಬಗ್ಗೆ ಕರುಣೆ ಬೆಳೆಸಿಕೊಳ್ಳಬೇಕು' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಭಾನುವಾರ ಸಲಹೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದ (ಡಬ್ಲ್ಯುಬಿಎನ್‌ಯುಜೆಎಸ್) 14ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, 'ವ್ಯಕ್ತಿಯ ಸಾಮರ್ಥ್ಯ ವೃದ್ಧಿ ಎಂದಿಗೂ ನಿಲ್ಲುವುದಿಲ್ಲ, ಸಾಯುವವರೆಗೂ ಕಲಿಯುವುದು ಇರುತ್ತದೆ. ಹಾಗಾಗಿ ಪ್ರತಿ ಸಲಹೆಗೂ ನಿಮ್ಮ ಮನಸ್ಸನ್ನು ತೆರೆದಿಡಿ. ಅಲ್ಲಿ ನೀವು ಒಳ್ಳೆಯ ಸ್ಫೂರ್ತಿಯನ್ನು ಪಡೆಯುವಿರಿ' ಎಂದರು.
'ವಿವಿಧ ಕ್ಷೇತ್ರಗಳಲ್ಲಿ ಸಾಮರ್ಥ್ಯ ವರ್ಧನೆಯ ಗುಣಲಕ್ಷಣಗಳು ಮತ್ತು ಮಾನವಕುಲದ ಬಗ್ಗೆ ರೂಢಿಸಿಕೊಳ್ಳುವ ಕರುಣೆಯು ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಮ್ಮನ್ನು ಎಂದಿಗೂ ವಿಫಲಗೊಳಿಸುವುದಿಲ್ಲ' ಎಂದೂ ಸಿಜೆಐ ಹೇಳಿದರು.