ನವದೆಹಲಿ: ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೊಸದಾಗಿ ಲಸಿಕೆಯನ್ನು ಖರೀದಿಸದಿರಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಅಲ್ಲದೆ ₹ 4,237 ಕೋಟಿ ಅಥವಾ 2022-23ನೇ ಸಾಲಿನ ಬಜೆಟ್‌ನಲ್ಲಿ ಲಸಿಕೆ ಉದ್ದೇಶಕ್ಕೆ ಮೀಸಲಿಟ್ಟ ಶೇ 85ರಷ್ಟು ಹಣವನ್ನು ಹಣಕಾಸು ಸಚಿವಾಲಯಕ್ಕೆ ಹಿಂದಿರುಗಿಸಲು ನಿರ್ಧರಿಸಲಾಗಿದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಇನ್ನೂ 1.8 ಕೋಟಿಗೂ ಅಧಿಕ ಡೋಸ್ ಲಸಿಕೆ ಲಭ್ಯವಿದೆ. ಇದರಿಂದ ಸುಮಾರು ಆರು ತಿಂಗಳ ಕಾಲ ಲಸಿಕಾ ಅಭಿಯಾನ ಮುಂದುವರಿಸಲು ಸಾಧ್ಯವಾಗಲಿದೆ. ಸೋಂಕು ತಗ್ಗಿದ ಕಾರಣ ಲಸಿಕೆ ಪಡೆಯುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.
ಸರ್ಕಾರದ ಬಳಿ ಇರುವ ಸಂಗ್ರಹ ಮುಗಿದುಹೋದರೂ ಮಾರುಕಟ್ಟೆಯಲ್ಲಿ ಕೋವಿಡ್ ಲಸಿಕೆ ಲಭ್ಯವಿರಲಿದೆ. ಆರು ತಿಂಗಳ ನಂತರ ಕೋವಿಡ್ ಸ್ಥಿತಿಗತಿಯನ್ನು ಆಧರಿಸಿ ಹೆಚ್ಚಿನ ಲಸಿಕೆಯನ್ನು ಸಂಗ್ರಹಿಸಬೇಕೇ ಅಥವಾ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೇ ಎಂದು ತೀರ್ಮಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದಾಗಿನಿಂದ ಲಸಿಕೆಗೆ ಬೇಡಿಕೆಯೂ ತಗ್ಗಿದೆ. ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಪಡೆಯುವಂತೆ 'ಕೋವಿಡ್ ಲಸಿಕೆ ಅಮೃತಮಹೋತ್ಸವ' ಅಭಿಯಾನ ಆರಂಭಿಸಿದರೂ ಅಷ್ಟೇನೂ ಸ್ಪಂದನೆ ವ್ಯಕ್ತವಾಗಲಿಲ್ಲ. ಅಲ್ಲದೆ ಈಗಾಗಲೇ ಸಂಗ್ರಹಿಸಿರುವ ಲಸಿಕೆಯ ಮುಕ್ತಾಯ ದಿನಾಂಕವೂ ಸಮೀಪಿಸುತ್ತಿದೆ. ಇದನ್ನು ಪರಿಗಣಿಸಿ ಸದ್ಯಕ್ಕೆ ಲಸಿಕೆಯನ್ನು ಖರೀದಿಸದಿರಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಈವರೆಗೆ 219.32 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.