ನವದೆಹಲಿ: ಕೈದಿಗಳಿಗೆ ಮತದಾನದ ಹಕ್ಕನ್ನು ತಡೆಯುವ ಜನಪ್ರತಿನಿಧಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ.
ವಕೀಲ ಜೊಹೆಬ್ ಹೊಸೈನ್ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು, ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
2019 ರಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಆದಿತ್ಯ ಪ್ರಸನ್ನ ಭಟ್ಟಾಚಾರ್ಯ ಎಂಬುವವರು ಜೈಲು ಶಿಕ್ಷೆಗೊಳಗಾದ ವ್ಯಕ್ತಿಯನ್ನು ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ನಿಷೇಧಿಸುವ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 62 (5) ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಪೀಠವು ಡಿಸೆಂಬರ್ 29 ರಂದು ಮುಂದಿನ ವಿಚಾರಣೆ ನಡೆಸಲಿದೆ.
'ಯಾವುದೇ ವ್ಯಕ್ತಿಯು ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದರೆ, ಜೈಲು ಶಿಕ್ಷೆ ಅಥವಾ ಇನ್ನಾವುದೇ ರೀತಿಯಲ್ಲಿ ಅಥವಾ ಪೋಲೀಸರ ಕಾನೂನುಬದ್ಧ ವಶದಲ್ಲಿದ್ದರೆ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸಬಾರದು. ಈ ಉಪ ವಿಭಾಗದಲ್ಲಿರುವ ಯಾವುದೂ ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಮತದಾನವನ್ನು ತಡೆಗಟ್ಟುವ ಬಂಧನಕ್ಕೆ ಒಳಪಟ್ಟ ವ್ಯಕ್ತಿಗೆ ಅನ್ವಯಿಸುವುದಿಲ್ಲ' ಎಂದು ಕಾಯ್ದೆಯ ದೋಷಾರೋಪಣೆಯ ಉಪಬಂಧ ತಿಳಿಸುತ್ತದೆ.