ನವದೆಹಲಿ: ಪಟಾಕಿ ನಿಷೇಧಕ್ಕೆ ಸಂಬಂಧಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತ ಅವರನ್ನೊಳಗೊಂಡ ನ್ಯಾಯಪೀಠವು, 'ಪಟಾಕಿ ನಿಷೇಧದ ಅರ್ಜಿಯನ್ನು ತುರ್ತಾಗಿ ಮಾಡಲಾಗದು.
ದೀಪಾವಳಿ ಹತ್ತಿರದಲ್ಲಿದ್ದು, ಜನರು ಪಟಾಕಿಗಳ ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡಿರುತ್ತಾರೆ. ನೀವು ಎರಡು ತಿಂಗಳು ಮುಂಚಿತವಾಗಿ ಬರಬೇಕಿತ್ತು' ಎಂದು ಅರ್ಜಿದಾರರಿಗೆ ಸೂಚಿಸಿದೆ.
ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಪಟಾಕಿ ನಿಷೇಧಿಸಿರುವ ಕುರಿತು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು 'ಕ್ಷಮಿಸಿ. ದೀಪಾವಳಿಯ ನಂತರ ಅರ್ಜಿಯ ವಿಚಾರಣೆ ನಡೆಸಲಾಗುವುದು' ಎಂದು ತಿಳಿಸಿತು.
2023ರ ಜನವರಿ 1ರವರೆಗೆ ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಆದೇಶದ ವಿರುದ್ಧದ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿತ್ತು. ತುರ್ತು ವಿಚಾರಣೆಯನ್ನು ಕೋರಿದ್ದ ವಕೀಲರನ್ನು ದೆಹಲಿ ಹೈಕೋರ್ಟ್‌ಗೆ ಸಂಪರ್ಕಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ.
ಪಟಾಕಿ ನಿಷೇಧದ ವಿರುದ್ಧ ಹಸಿರು ಪಟಾಕಿ ವ್ಯಾಪಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಜನವರಿ 1ರವರೆಗೆ ಮುಂದೂಡಿದೆ.
ಪಟಾಕಿ ಬಳಕೆಯನ್ನೇ ಏಕಾಏಕಿ ನಿಷೇಧಿಸಲು ಸಾಧ್ಯವಿಲ್ಲ. ಬೇರಿಯಂ ಲವಣಗಳನ್ನು ಹೊಂದಿರುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಸ್ಪಷ್ಟಪಡಿಸಿತ್ತು.