ನವದೆಹಲಿ: ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯ ಎರಡು ಪ್ರತಿ ನಿಡಬೇಕು ಎಂಬ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರಕ್ಕೆ ನೋಟಿಸ್ ಜಾರಿಮಾಡಿದೆ.
ವೆಚ್ಚ ತಪ್ಪಿಸುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಕಾಗದ ಉಳಿಸಲು ಈ ಕ್ರಮಕ್ಕೆ ಪರ್ಯಾಯ ಮಾರ್ಗ ಅನುಸರಿಸಬೇಕು ಎಂದು ಕೋರಿ ಇಬ್ಬರು ವಕೀಲರು ಪಿಐಎಲ್ ಸಲ್ಲಿಸಿದ್ದರು. 'ಮತದಾರರ ನೋಂದಣಿ ನಿಯಮ 1960'ದ 11 (ಸಿ) ಮತ್ತು 22 (ಸಿ) ಅನ್ನು ಪ್ರಶ್ನಿಸಿದ್ದರು.
ಪ್ರತಿ ಅಭ್ಯರ್ಥಿಗೆ ಎರಡು ಪ್ರತಿ ಮತದಾರರ ಪಟ್ಟಿಯನ್ನು ಉಚಿತವಾಗಿ ನೀಡಬೇಕು ಎಂಬ ನಿಯಮದಿಂದ ದೇಶದ ಮೇಲೆ ಸುಮಾರು ₹ 47.84 ಕೋಟಿ ಹೊರೆ ಆಗುತ್ತಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಬಿ.ಎಂ.ತ್ರಿವೇದಿ ಅವರಿದ್ದ ಪೀಠವು ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತು.