ತಿರುವನಂತಪುರ: ರಾತ್ರಿ ವೇಳೆ ಶಾಲಾ-ಕಾಲೇಜು ವಿಹಾರಗಳನ್ನು ಆಯೋಜಿಸುವುದನ್ನು ನಿಷೇಧಿಸಲು ಮಾನವ ಹಕ್ಕುಗಳ ಆಯೋಗ ಚಿಂತನೆ ನಡೆಸುತ್ತಿದೆ.
ಈ ಸಂಬಂಧ ಸಾರಿಗೆ ಆಯುಕ್ತರಿಂದ ವಿವರಣೆ ಕೇಳಲಾಗಿದೆ. ನಾಲ್ಕು ವಾರಗಳಲ್ಲಿ ವಿವರಣೆ ನೀಡುವಂತೆ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆಂಟನಿ ಡೊಮಿನಿಕ್ ಆದೇಶಿಸಿದ್ದಾರೆ. ಪಾಲಕ್ಕಾಡ್ ವಡಕಂಚೇರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಜನರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ದಾಖಲಾಗಿರುವ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ದೂರಿನ ಪ್ರಕಾರ, ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರವಾಸಗಳು ರಾತ್ರಿಯಲ್ಲಿ ಪ್ರಾರಂಭವಾಗುತ್ತವೆ ಮತ್ತು ಅಂತ್ಯಗೊಳ್ಳುತ್ತವೆ. ಸಂಜೆ ಹಿಂತಿರುಗಿ ಮುಂಜಾನೆ ಸ್ಥಳಕ್ಕೆ ತಲುಪುವುದು ಅನುಸರಿಸುವ ಕ್ರಮವಾಗಿದೆ. ರಾತ್ರಿ ಹಿಂತಿರುಗಿ ಮತ್ತು ಬೆಳಿಗ್ಗೆ ಶಾಲೆಗಳನ್ನು ತಲುಪುವÀ ಪ್ರವೃತ್ತಿಗಳು ಅಪಘಾತಗಳಿಗೆ ಕಾರಣವಾಗುತ್ತವೆ. ದೂರಿನ ಪ್ರಕಾರ ರಾತ್ರಿ ವೇಳೆ ಅತಿಯಾದ ವೇಗ ಹಾಗೂ ಚಾಲಕರ ಡ್ರಗ್ಸ್ ಬಳಕೆ ಹೆಚ್ಚಳ ಅಪಘಾತಕ್ಕೆ ಮುಖ್ಯ ಹೇತುವಾಗಿದೆ ಎನ್ನಲಾಗಿದೆ.
2007ರಲ್ಲಿಯೇ ರಾತ್ರಿ 9 ಗಂಟೆ ನಂತರ ಮತ್ತು ಬೆಳಗ್ಗೆ 6 ಗಂಟೆಯ ಮೊದಲು ಪ್ರಯಾಣ ಮಾಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ನೀಡಿತ್ತು. ಆದರೆ ಸುತ್ತೋಲೆ ಈವರೆಗೆ ಜಾರಿಗೆ ಬಂದಿಲ್ಲ. ಮಾನವ ಹಕ್ಕುಗಳ ಆಯೋಗಕ್ಕೆ ಬಂದಿರುವ ದೂರಿನಲ್ಲಿಯೂ ಇದನ್ನು ಎತ್ತಿ ತೋರಿಸಲಾಗಿದೆ.