ಚೆನ್ನೈ: ಸೂಪರಿಂಟೆಂಡೆಂಟ್ ಶ್ರೀಜಿತ್ ಮತ್ತು ಇನ್‌ಸ್ಪೆಕ್ಟರ್ ವಿಘ್ನೇಶ್ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಏಳು ಸದಸ್ಯರ ತಂಡ ಮತ್ತು ಐವರು ಅಧಿಕಾರಿಗಳ ತಂಡವು ದೂರುದಾರರಾದ ಉಕ್ಕಡಂನ ಸಂಗಮೇಶ್ವರ ದೇವಸ್ಥಾನದ ಅರ್ಚಕ ಎಸ್. ಸುಂದರೇಶನ್ ಅವರಿಂದ ಮಾಹಿತಿ ಪಡೆಯುತ್ತಿದೆ.
ಅಕ್ಟೋಬರ್ 23 ರಂದು ಮುಂಜಾನೆ ಸಂಗಮೇಶ್ವರ ದೇವಸ್ಥಾನದ ಬಳಿ ಕಾರು ಸ್ಫೋಟದಲ್ಲಿ 25 ವರ್ಷದ ಇಂಜಿನಿಯರ್ ಜಮೀಶಾ ಮುಬಿನ್ ಮೃತಪಟ್ಟಿದ್ದರು. ದೀಪಾವಳಿ ಮುನ್ನಾದಿನದಂದು ನಡೆದ ಕಾರು ಸ್ಫೋಟವು ಕೊಯಮತ್ತೂರಿನಲ್ಲಿ ಆತಂಕವನ್ನು ಉಂಟುಮಾಡಿದೆ.
ಈ ಬಗ್ಗೆ ತನಿಖೆ ನಡೆಸಿದ ತಮಿಳುನಾಡು ಪೊಲೀಸರಿಗೆ ಕಾರು ಸ್ಫೋಟವು ಆಕಸ್ಮಿಕ ಅಪಘಾತವಲ್ಲ ಎಂದು ತಿಳಿದುಬಂದಿತ್ತು. ಪೊಲೀಸ್ ತಂಡ ಮುಬಿನ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಆತನ ನಿವಾಸದಲ್ಲಿ ಪೊಟಾಶಿಯಂ ನೈಟ್ರೇಟ್, ಸಲ್ಫರ್ ಮತ್ತು ಅಲ್ಯುಮಿನಿಯಂ ಪೌಡರ್, ಇದ್ದಿಲು ಮುಂತಾದ ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಮೃತ ಜಮೀಶಾ ಮುಬಿನ್ ಸಹಚರರಾದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ಅಜರುದ್ದೀನ್, ಫಿರೋಜ್ ಇಸ್ಮಾಯಿಲ್, ಮೊಹಮ್ಮದ್ ತಲ್ಹಾ, ಮೊಹಮ್ಮದ್ ರಿಯಾಸ್, ಅಫ್ಸರ್ ಖಾನ್ ಮತ್ತು ಮೊಹಮ್ಮದ್ ನವಾಸ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಕೊಯಮತ್ತೂರ್‌ಗೆ ಆಗಮಿಸಿರುವ ಎನ್‌ಐಎ ತಂಡ ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿದ್ದು, ಆರೋಪಿಗಳ ಹಿನ್ನೆಲೆ ಹಾಗೂ ಅವರ ದೂರವಾಣಿ ಸಂಪರ್ಕದ ಕುರಿತು ಹಲವು ಮಾಹಿತಿ ಕಲೆಹಾಕಿದೆ.
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಪ್ರಕರಣದ ತನಿಖೆಯನ್ನು ಎನ್‌ಐಎ ಶಿಫಾರಸು ಮಾಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.