HEALTH TIPS

'ಉಚಿತ ಕೊಡುಗೆ'ಗಳಿಗೆ ಅಂಕುಶ ಅಪಚಾರ ಮಾಡಿಕೊಂಡ ಆಯೋಗ

Top Post Ad

Click to join Samarasasudhi Official Whatsapp Group

Qries

 

         ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳ ವಿಚಾರದಲ್ಲಿ ತನ್ನ ನಿಲುವನ್ನು ಬದಲಾಯಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗವು ತನಗೆ ತಾನೇ ಅಪಚಾರ ಮಾಡಿಕೊಂಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಹಿಂದೆ ಒಂದು ನಿಲುವು ವ್ಯಕ್ತಪಡಿಸಿದ್ದ ಆಯೋಗವು ಈಚೆಗೆ ರಾಜಕೀಯ ಪಕ್ಷಗಳಿಗೆ ಬರೆದ ಪತ್ರದಲ್ಲಿ ಇನ್ನೊಂದು ನಿಲುವು ತಾಳಿದೆ.

              ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೆಲವು 'ಉಚಿತ ಕೊಡುಗೆ'ಗಳ ಭರವಸೆಗಳನ್ನು ನೀಡುವುದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು 'ರೇವಡಿ' ಸಂಸ್ಕೃತಿ ಎಂದು ಕರೆದ ನಂತರದಲ್ಲಿ ಇದು ದೇಶದಲ್ಲಿ ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ. ರಾಜಕೀಯ ಪಕ್ಷಗಳು ನೀಡುವ, ವಾಸ್ತವದಲ್ಲಿ ಈಡೇರಿಸಲು ಆಗದಂತಹ ಭರವಸೆಗಳನ್ನು ನಿಷೇಧಿಸಬೇಕು ಎಂದು ಕೋರಿ ಕೆಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ. ಇಂತಹ ಭರವಸೆಗಳ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸುವ ಮಾತನ್ನು ಸುಪ್ರೀಂ ಕೋರ್ಟ್‌ ಆಡಿತ್ತು. ಆಗ ಚುನಾವಣಾ ಆಯೋಗವು ತಾನು ಈ ಸಮಿತಿಯ ಸದಸ್ಯ ಆಗುವುದು ಸೂಕ್ತವಲ್ಲ ಎಂದು ಹೇಳಿತ್ತು. ಇಂತಹ ಭರವಸೆಗಳು ಮತದಾರ ಹಾಗೂ ರಾಜಕೀಯ ಪಕ್ಷಗಳ ನಡುವಿನ ವಿಚಾರ, ಇವು ಎಷ್ಟರಮಟ್ಟಿಗೆ ಸರಿ, ಅಥವಾ ಎಷ್ಟರಮಟ್ಟಿಗೆ ತಪ್ಪು ಎಂಬುದನ್ನು ತಾನು ತೀರ್ಮಾನಿಸುವುದು ಸೂಕ್ತವಲ್ಲ ಎಂದು ಆಯೋಗವು ಭಾವಿಸಿದ್ದು ಸರಿಯಾಗಿಯೇ ಇತ್ತು.

                   ಆದರೆ ಆಯೋಗವು ಈಗ ಭಿನ್ನ ನಿಲುವು ತಾಳಿದೆ. ರಾಜಕೀಯ ಪಕ್ಷಗಳು ತಾವು ನೀಡಿದ ಭರವಸೆಯನ್ನು ಈಡೇರಿಸಲು ಸಂಪನ್ಮೂಲವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದನ್ನು ವಿವರಿಸಬೇಕು, ಇದರಿಂದಾಗಿ ಹಣಕಾಸಿನ ಸ್ಥಿತಿಯ ಮೇಲೆ ಆಗುವ ಪರಿಣಾಮ ಏನು ಎಂಬುದನ್ನು ಕೂಡ ತಿಳಿಸಬೇಕು ಎಂದು ಆಯೋಗವು ಹೇಳಿದೆ. ಇದನ್ನು ಮಾಡಲು ರಾಜಕೀಯ ಪಕ್ಷಗಳು ಚುನಾವಣಾ ‍ಪ್ರಣಾಳಿಕೆಗಳಲ್ಲಿ ಅನುಸರಿಸಬೇಕಿರುವ ಮಾದರಿ ಏನು ಎಂಬುದನ್ನು ತಾನು ತಿಳಿಸುವುದಾಗಿಯೂ, ನಂತರದಲ್ಲಿ ಮಾದರಿ ನೀತಿ ಸಂಹಿತೆಯೊಂದನ್ನು ರೂಪಿಸುವುದಾಗಿಯೂ ಆಯೋಗ ಹೇಳಿದೆ. ಆಯೋಗವು ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ತಾಳಿದ್ದ ನಿಲುವಿಗೂ ಈಗ ತಾಳಿರುವ ನಿಲುವಿಗೂ ಬಹಳ ವ್ಯತ್ಯಾಸ ಇದೆ. ಉಚಿತ ಕೊಡುಗೆಗಳ ಸಂಸ್ಕೃತಿಯು ಅಪಾಯಕಾರಿ ಎಂದು ಪ್ರಧಾನಿಯವರು ಹೇಳಿದ್ದಾರೆ. ಇದನ್ನು ನಿಯಂತ್ರಿಸಲು ಕೇಂದ್ರವು ಉತ್ಸುಕವಾಗಿರಬಹುದು. ಆಮ್‌ ಆದ್ಮಿ ಪಕ್ಷವನ್ನು (ಎಎಪಿ) ಬಿಜೆಪಿಯು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ತನ್ನ ಎದುರಾಳಿ ಎಂದು ಭಾವಿಸಿರುವಂತಿದೆ. ಎಎಪಿಯು ಉಚಿತ ಕೊಡುಗೆಗಳನ್ನು 'ಅಭಿವೃದ್ಧಿ ಕ್ರಮಗಳು' ಎಂದು ವ್ಯಾಖ್ಯಾನಿಸಿದೆ. ಇಂತಹ ಕ್ರಮಗಳಿಂದಾಗಿ ಅದು ಬಲ ಹೆಚ್ಚಿಸಿಕೊಂಡಿದೆ. ಆದರೆ, ಯಾವುದು ಉಚಿತ ಕೊಡುಗೆ ಹಾಗೂ ಯಾವುದು ಅಭಿವೃದ್ಧಿ ಕಾರ್ಯಕ್ರಮ ಎಂಬುದು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಯಾಗಬೇಕಿರುವ ವಿಷಯ ಅಥವಾ ರಾಜಕೀಯ ವೇದಿಕೆಗಳಲ್ಲಿ ಚರ್ಚೆಯಾಗಬೇಕಿರುವ ವಿಷಯ. ಇಂತಹ ಚರ್ಚೆಗಳಲ್ಲಿ ಚುನಾವಣಾ ಆಯೋಗಕ್ಕೆ ಯಾವುದೇ ಪಾತ್ರ ಇರಬಾರದು. ಇದು ಆಯೋಗದ ಕರ್ತವ್ಯಗಳ ಭಾಗ ಅಲ್ಲ. ಚುನಾವಣಾ ಭರವಸೆಗಳು ಹಾಗೂ ಅವುಗಳ ಪರಿಣಾಮಗಳ ಬಗ್ಗೆ ತೀರ್ಮಾನಿಸುವ ಪರಿಣತಿ, ವ್ಯವಸ್ಥೆ ಆಯೋಗದಲ್ಲಿ ಇಲ್ಲ.

                ವಾಸ್ತವದಲ್ಲಿ ಈ ವಿಚಾರದಲ್ಲಿ ನ್ಯಾಯಾಲಯದ ಪಾತ್ರ ಏನು ಎಂಬುದು ಕೂಡ ಸ್ಪಷ್ಟವಿಲ್ಲ. ಏಕೆಂದರೆ, ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ನೀಡುವ ಭರವಸೆಗಳಿಂದಾಗಿ ಸಂವಿಧಾನದ ಉಲ್ಲಂಘನೆಯಾದಂತೆ ಅಥವಾ ನಿರ್ದಿಷ್ಟ ಕಾನೂನಿನ ಉಲ್ಲಂಘನೆಯಾದಂತೆ ಕಾಣುತ್ತಿಲ್ಲ. ಮತದಾರರಿಗೆ ಯಾವುದೂ ಅರ್ಥ ಆಗುವುದಿಲ್ಲ, ಅವರೆಲ್ಲ ವಿಚಾರಶೂನ್ಯರು, ಪಕ್ಷಗಳು ನೀಡುವ ದೊಡ್ಡ ಭರವಸೆಗಳನ್ನು ಅವರು ಯಥಾವತ್ತಾಗಿ ನಂಬಿಬಿಡುತ್ತಾರೆ ಎಂದು ಭಾವಿಸುವುದು ಸರಿಯಲ್ಲ. ಆ ರೀತಿ ಭಾವಿಸುವುದು ಪ್ರಜಾತಂತ್ರದ ಆಶಯವನ್ನೇ ಪ್ರಶ್ನಿಸಿದಂತೆ ಆಗುತ್ತದೆ. ಚುನಾವಣಾ ಆಯೋಗ ಮುಂದಿರಿಸಿರುವ ಪ್ರಸ್ತಾವವು ಆಯೋಗಕ್ಕೆ ಇರುವ ಅಧಿಕಾರ ವ್ಯಾಪ್ತಿಯನ್ನು ಮೀರಿ ನಿಂತಿದೆ, ಉಚಿತ ಕೊಡುಗೆಗಳ ವಿಚಾರದಲ್ಲಿ ಸರ್ಕಾರ ತಾಳಿರುವ ನಿಲುವು ಆಧರಿಸಿ ಆಯೋಗ ಹೀಗೆ ಮಾಡಿರುವಂತೆ ಕಾಣುತ್ತಿದೆ ಎಂದು ವಿರೋಧ ಪಕ್ಷಗಳು ಹೇಳಿವೆ. ವಿರೋಧ ಪಕ್ಷಗಳ ಕಳವಳದಲ್ಲಿ ಹುರುಳಿದೆ. ಈ ಪ್ರಸ್ತಾವವನ್ನು ಮುಂದಿನ ಹಂತಕ್ಕೆ ಒಯ್ಯುವ ಕೆಲಸವನ್ನು ಆಯೋಗ ಮಾಡಬಾರದು. ಪಕ್ಷಗಳು ಮತದಾರರಿಗೆ ನೀಡುವ ಭರವಸೆಗಳ ವಿಚಾರದಲ್ಲಿ ಯಾವುದೇ ಪ್ರಜಾತಂತ್ರ ರಾಷ್ಟ್ರದಲ್ಲಿ ಯಾವ ಆಯೋಗವೂ ಹಸ್ತಕ್ಷೇಪ ಮಾಡುವುದಿಲ್ಲ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries