ನವದೆಹಲಿ :ಕೇಂದ್ರವು ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರನ್ನು ಮಂಗಳವಾರ ಬದಲಿಸಿದ್ದು,ಕಾಂಗ್ರೆಸ್ ಮತ್ತು ಟಿಎಂಸಿಗೆ ಯಾವುದೇ ಪ್ರಮುಖ ಸಮಿತಿಯ ನೇತೃತ್ವ ನೀಡಲಾಗಿಲ್ಲ.
ಈಗ ಗೃಹ,ಮಾಹಿತಿ ಮತ್ತು ತಂತ್ರಜ್ಞಾನ,ರಕ್ಷಣೆ,ವಿದೇಶಾಂಗ ವ್ಯವಹಾರಗಳು,ಹಣಕಾಸು ಮತ್ತು ಆರೋಗ್ಯ ಈ ಆರು ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಸೇರಿದ ಸಂಸದರಾಗಿದ್ದಾರೆ.
ಕಾಂಗ್ರೆಸ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ,ಅರಣ್ಯ ಮತ್ತು ಹವಾಮಾನ ಬದಲಾವಣೆ ಕುರಿತ ಸಮಿತಿಯ ಅಧ್ಯಕ್ಷತೆಯನ್ನು ನೀಡಲಾಗಿದೆ. ಗೃಹವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಕಾಂಗ್ರೆಸ್ನ ಅಭಿಷೇಕ ಮನು ಸಿಂಘ್ವಿ ಅವರ ಬದಲು ಬಿಜೆಪಿ ಸಂಸದ ಬ್ರಿಜ್ ಲಾಲ್ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಕಾಂಗ್ರೆಸ್ ನ ಶಶಿ ತರೂರ್ ಬದಲು ಏಕನಾಥ ಶಿಂಧೆ ಬಣದ ಶಿವಸೇನೆ ಸಂಸದ ಪ್ರತಾಪರಾವ್ ಜಾಧವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಂಸದೀಯ ಸಮಿತಿಯ ಅಧ್ಯಕ್ಷತೆಯನ್ನು ಹೊಂದಿದ್ದ ಟಿಎಂಸಿಗೆ ಯಾವುದೇ ಸಮಿತಿಯ ನೇತೃತ್ವವನ್ನು ನೀಡಲಾಗಿಲ್ಲ. ಪ್ರಮುಖ ಸಮಿತಿಗಳ ಹುದ್ದೆಗಳಿಂದ ತಮ್ಮನ್ನು ವಂಚಿತರಾಗಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಟಿಎಂಸಿ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ದಾಳಿ ನಡೆಸಿವೆ.
ಇದೊಂದು ಕರಾಳ ಕ್ರಮ ಎಂದು ಬಣ್ಣಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ ಗೊಗೊಯಿ ಅವರು,ಪ್ರಧಾನಿ ನರೇಂದ್ರ ಮೋದಿಯವರು ಚೀನಾದ ಏಕಪಕ್ಷ ಆಡಳಿತ ಮತ್ತು ರಶ್ಯದ ಮಿತ ಜನಾಧಿಪತ್ಯ ಮಾದರಿಗೆ ಮಾರು ಹೋಗಿರುವಂತಿದೆ ಎಂದು ಹೇಳಿದರು.
ಎರಡನೇ ಅತಿ ದೊಡ್ಡ ಪ್ರತಿಪಕ್ಷವಾಗಿದ್ದರೂ ತನ್ನ ಪಕ್ಷಕ್ಕೆ ಒಂದೂ ಸಮಿತಿಯ ಅಧ್ಯಕ್ಷತೆ ಲಭಿಸದ್ದಕ್ಕೆ ಆಘಾತ ವ್ಯಕ್ತಪಡಿಸಿದ ಟಿಎಂಸಿಯ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರಿಯಾನ್ ಅವರು,ಅತ್ಯಂತ ದೊಡ್ಡ ಪ್ರತಿಪಕ್ಷ ಕಾಂಗ್ರೆಸ್ ಎರಡು ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷತೆಗಳನ್ನು ಕಳೆದುಕೊಂಡಿದೆ. ಇದು ನವ ಭಾರತದ ಕಟು ವಾಸ್ತವಾಗಿದೆ ಎಂದು ಹೇಳಿದರು.
ಈ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಎಸ್ಪಿಯ ರಾಮಗೋಪಾಲ ಯಾದವ ಬದಲು ಬಿಜೆಪಿ ರಾಜ್ಯಸಭಾ ಸಂಸದ ಭುವನೇಶ್ವರ ಕಲಿಟಾ ನೇಮಕಗೊಂಡಿದ್ದಾರೆ.
ಬಿಜೆಪಿಯ ಲಾಕೆಟ್ ಚಟರ್ಜಿ ಮತ್ತು ವಿವೇಕ್ ಠಾಕೂರ್ ಅವರು ಅನುಕ್ರಮವಾಗಿ ಆಹಾರ ಹಾಗೂ ಶಿಕ್ಷಣ, ಮಹಿಳೆಯರು,ಮಕ್ಕಳು, ಯುವಜನ ಮತ್ತು ಕ್ರೀಡೆ ಕುರಿತ ಸಮಿತಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ವಸತಿ ಮತ್ತು ನಗರ ವ್ಯವಹಾರಗಳ ಸಂಸದೀಯ ಸಮಿತಿ ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರ ಸ್ಥಾನದಲ್ಲಿ ಜೆಡಿಯು ನಾಯಕ ರಾಜೀವ್ ರಂಜನ್ ಲಲ್ಲನ್ ಸಿಂಗ್ರನ್ನು ನೇಮಿಸಲಾಗಿದ್ದು, ಪಾಲ್ಗೆ ಇಂಧನ ಕುರಿತು ಸಮಿತಿಯ ಅಧ್ಯಕ್ಷತೆಯನ್ನು ನೀಡಲಾಗಿದೆ.
ಬಿಜೆಡಿಯ ಭರ್ತೃಹರಿ ಮೆಹತಾಬ್ ಅವರಿಗೆ ಕಾರ್ಮಿಕ,ಜವಳಿ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿಯ ಅಧ್ಯಕ್ಷತೆ ಒಲಿದಿದ್ದರೆ ಟಿಆರ್‌ಎಸ್ ಅಧ್ಯಕ್ಷತೆಯಲ್ಲಿದ್ದ ಕೈಗಾರಿಕೆ ಕುರಿತ ಸಂಸದೀಯ ಸಮಿತಿಯ ನೇತೃತ್ವ ಈಗ ಡಿಎಂಕೆಗೆ ಸಿಕ್ಕಿದೆ.