ಪತ್ತನಂತಿಟ್ಟ: ಶಬರಿಮಲೆ ಯಾತ್ರಾರ್ಥಿಗಳಿಗೆ ಸೇಫ್‍ಝೋನ್ ಯೋಜನೆ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಯಾತ್ರಾರ್ಥಿಗಳ ಅಗತ್ಯಗಳನ್ನು ಪರಿಗಣಿಸಿ ಏಳು ನಿಮಿಷಗಳಲ್ಲಿ ತುರ್ತು ನೆರವು ನೀಡುವ ಯೋಜನೆ ಇದಾಗಿದೆ.
ಈ ಬಗ್ಗೆ ಸಾರಿಗೆ ಸಚಿವ ಆಂಟನಿ ರಾಜು ಶುಕ್ರವಾರ ಮಾಹಿತಿ ನೀಡಿದ್ದಾರೆ. ಯೋಜನೆಯ ಭಾಗವಾಗಿ, ಕೆ.ಎಸ್.ಆರ್.ಟಿ.ಸಿ. ಮಂಡಲ - ಮಕರಬೆಳಕು ಪರ್ವ ಕಾಲದ ಸಂದರ್ಭ ಯಾತ್ರಾರ್ಥಿಗಳಿಗೆ ವ್ಯಾಪಕ ವ್ಯವಸ್ಥೆಗಳನ್ನು ಮಾಡುತ್ತದೆ. ತೀರ್ಥಯಾತ್ರೆಯ ಸಂದರ್ಭದಲ್ಲಿ ಅಪಘಾತಗಳನ್ನು ತಪ್ಪಿಸುವ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸುವ ಉದ್ದೇಶದಿಂದ ಸುರಕ್ಷಿತ ವಲಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸುಮಾರು 400 ಕಿಲೋಮೀಟರ್ ರಸ್ತೆಗಳನ್ನು ಯಾತ್ರಾರ್ಥಿಗಳ ಸುರಕ್ಷಿತ ಪ್ರಯಾಣಕ್ಕಾಗಿ ಆಯ್ಕೆ ಮಾಡಲಾಗುತ್ತದೆ. 24 ಗಂಟೆಗಳ ಮೂರು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಇವೆಲ್ಲವುಗಳ ಹೊರತಾಗಿ ಆಂಬ್ಯುಲೆನ್ಸ್, ಕ್ರೇನ್, ರಿಕವರಿ ವೆಹಿಕಲ್‍ಗಳು, 21 ಸ್ಕ್ಯಾಡ್ ಮತ್ತು ಗಸ್ತು ತಂಡಗಳ ಸೇವೆಯನ್ನು ಸಹ ಖಾತ್ರಿಪಡಿಸಲಾಗುವುದು. ಏಳು ನಿಮಿಷಗಳಲ್ಲಿ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಇಲವುಂಕಲ್‍ನಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸಹ ತೆರೆಯಲಾಗುತ್ತದೆ.
ಶಬರಿಮಲೆ ಸೀಸನ್ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ನೇತೃತ್ವದಲ್ಲಿ ವಿಸ್ತೃತ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗುವುದು ಎಂದು ಆ್ಯಂಟನಿ ರಾಜು ತಿಳಿಸಿದ್ದಾರೆ.ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಅನಂತಗೋಪನ್, ಶಾಸಕರಾದ ಕೆ.ಯು.ಜನೀಶ್ ಕುಮಾರ್, ಪ್ರಮೋದ್ ನಾರಾಯಣನ್, ಎಂ.ಪಿ. ಆಂಥೋನಿ, ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್. ಅಯ್ಯರ್ ಮತ್ತಿತರರು ಭಾಗವಹಿಸಿದ್ದರು.
ಸುರಕ್ಷಿತ ವಲಯ ಯೋಜನೆ; ಶಬರಿಮಲೆ ಯಾತ್ರಾರ್ಥಿಗಳಿಗೆ ಏಳು ನಿಮಿಷಗಳಲ್ಲಿ ತುರ್ತು ನೆರವು ಲಭ್ಯ
0
ಅಕ್ಟೋಬರ್ 28, 2022