ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಮ್ಮು ಹಾಗೂ ರಜೌರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮಂಗಳವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಆಡಳಿತದ ಅಧಿಕೃತ ಅಧಿಸೂಚನೆಯು 'ದೇಶವಿರೋಧಿ ಶಕ್ತಿಗಳು ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಸಾರ್ವಜನಿಕ ಸುವ್ಯವಸ್ಥೆ ಹದಗೆಡಬಹುದು' ಎಂಬ ಭಯದಿಂದ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.
ಮಂಗಳವಾರ ಸಂಜೆ 7 ಗಂಟೆವರೆಗೆ ಅಮಾನತು ಜಾರಿಯಲ್ಲಿರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಖಚಿತಪಡಿಸಿದ್ದಾರೆ.
ಅಕ್ಟೋಬರ್ 5 ರಂದು ಶ್ರೀನಗರದ ರಾಜಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಈ ಉನ್ನತ ಮಟ್ಟದ ಸಭೆಯಲ್ಲಿ ಎಲ್‌ಜಿ ಮನೋಜ್ ಸಿನ್ಹಾ, ಸೇನೆಯ ಉನ್ನತ ಅಧಿಕಾರಿಗಳು, ಅರೆಸೇನಾ ಪಡೆಗಳು, ರಾಜ್ಯ ಪೊಲೀಸ್ ಮತ್ತು ನಾಗರಿಕ ಆಡಳಿತ ಭಾಗವಹಿಸಲಿದ್ದಾರೆ.
ಈಮಧ್ಯೆ, ಜಮ್ಮು ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರ್ದೇಶಕ ಹೇಮಂತ್ ಕೆ ಲೋಹಿಯಾ ಅವರು ನಿನ್ನೆ ರಾತ್ರಿ ಜಮ್ಮುವಿನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಪ್ರಕರಣದ ಪ್ರಮುಖ ಶಂಕಿತ ಆರೋಪಿ 23 ವರ್ಷದ ಮನೆಕೆಲಸಗಾರ ಯಾಸಿರ್ ಅಹ್ಮದ್‌ನನ್ನು ಬಂಧಿಸಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಎಡಿಜಿಪಿ ಮುಖೇಶ್ ಸಿಂಗ್, ಲೋಹಿಯಾ ಹತ್ಯೆಗೆ ಸಂಬಂಧಿಸಿದಂತೆ ಕೆಲವು ಆಧಾರರಹಿತ ಕಥೆಗಳನ್ನು ಹರಡಲಾಗುತ್ತಿದೆ. ತನಿಖೆಯು ಪೂರ್ಣಗೊಳ್ಳುವವರೆಗೂ ಯಾವುದೇ ಸುಳ್ಳು ಕಥೆಗಳಿಗೆ ಕಿವಿಕೊಡದಿರಿ' ಎಂದು ಅವರು ಹೇಳಿದರು.