ನವದೆಹಲಿ: ಯಮುನಾ ನದಿ ನೀರು ಕಲುಷಿತವಾಗಿದೆ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆ ನೀರು ಶುದ್ಧವಾಗಿದೆ ಎಂದು ಸಾಬೀತುಪಡಿಸಲು ದೆಹಲಿಯ ಜಲ ಮಂಡಳಿ ನಿರ್ದೇಶಕರು ಅದೇ ನೀರಿನಲ್ಲಿ ಸ್ನಾನ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯಲ್ಲಿ ಛತ್ ಪೂಜೆ ಸಮೀಪಿಸುತ್ತಿದ್ದಂತೆ ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಲಾಗಿದೆ. ಇದರಿಂದ ನದಿ ನೀರು ವಿಷಪೂರಿತವಾಗಿದ್ದು, ಕಲುಷಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು.
ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು, ಯಮುನಾದ ಕಾಳಿಂದಿ ಕುಂಜ್ ಘಾಟ್‍ಗೆ ಭೇಟಿ ನೀಡಿದ್ದರು. ಈ ವೇಳೆ ಕೆಲ ಆರೋಪಗಳನ್ನು ಮಾಡಿದ್ದರು. ಛತ್ ಪೂಜೆಗೂ ಮುನ್ನ ದೆಹಲಿ ಜಲಮಂಡಳಿ ಅಧಿಕಾರಿಗಳು ನದಿಗೆ ಡಿಫೋಮರ್ ಕೆಮಿಕಲ್ ಅನ್ನು ಸಿಂಪಡಿಸಿದ್ದು, ರಾಸಾಯನಿಕ ಬಳಸಿದ್ದರಿಂದ ನದಿ ನೀರು ಕಲುಷಿತಗೊಂಡಿದೆ. ಇದರಿಂದ ಛತ್ ಪೂಜೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದರು.
8 ವರ್ಷಗಳ ಬಳಿಕ ಈಗ ಇದನ್ನು ಸ್ವಚ್ಛಗೊಳಿಸಬೇಕು ಎಂದು ನೆನಪಾಗಿದ್ಯಾ? ಇಲ್ಲಿ ನೀವು ಸಾಕಷ್ಟು ಜನರನ್ನು ಕೊಲ್ಲುತ್ತಿದ್ದೀರಾ. ಎಂಟು ವರ್ಷಗಳಿಂದ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ನಿಮಗೆ ಸಾಧ್ಯವಾಗಲಿಲ್ಲ. ಈಗ ಬಂದು ಇಲ್ಲಿ ಸ್ನಾನ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಜಲ ಮಂಡಳಿ ನಿರ್ದೇಶಕ ಸಂಜಯ್ ಶರ್ಮಾ ಅವರು ಯಮುನಾ ನದಿ ನೀರಿನಲ್ಲಿ ಸ್ನಾನ ಮಾಡಿ, ಇದರ ವಿಡಿಯೋ ಮಾಡಿ ನೀರು ಕಲುಷಿತಗೊಂಡಿಲ್ಲ ಎಂಬುದನ್ನು ಸಾಬೀತುಪಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಜಯ್ ಶರ್ಮಾ, ನೀರಿಗೆ ರಾಸಾಯನಿಕ ಸಿಂಪಡಿಸುವ ಮುನ್ನ ಈ ಬಗ್ಗೆ ಎಲ್ಲಾ ಮುಂಜಾಗೃತಾ ಕ್ರಮವನ್ನು ಕೈಗೊಳ್ಳಳಾಗಿತ್ತು. ಹಾಗಾಗಿ ನೀರು ಕಲುಷಿತಗೊಂಡಿಲ್ಲ. ಈ ನೀರಿನಿಂದ ಯಾವುದೇ ಸಮಸ್ಯೆಯಾಗಿಲ್ಲ. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ನಿರೂಪಿಸಲು ಸ್ವತಃ ನಾನೇ ನೀರಿನಲ್ಲಿ ಸ್ನಾನ ಮಾಡಿದ್ದೇನೆ. ಸುಳ್ಳು ಆರೋಪಗಳು ಕೇಳಿ ಬಂದ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದಿದ್ದಾರೆ.