ಮುಂಬೈ: ರಾಜ್ಯದಲ್ಲಿ ವರದಿಯಾದ ಬಿಎ.2.3.20 ಮತ್ತು ಬಿಕ್ಯೂ.1 ನಂತಹ ಕೊರೊನಾದ ಹೊಸ ರೂಪಾಂತರಗಳಿಂದಾಗಿ ಚಳಿಗಾಲ ಮತ್ತು ಹಬ್ಬದ ಋತುವಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆಯು ಎಚ್ಚರಿಸಿದೆ.
ಈ ರೂಪಾಂತರಗಳು ದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿವೆ ಎಂದು ಅದು ಹೇಳಿದೆ. ಕೊರೊನಾ ವೈರಸ್‌ನ ಹೊಸ ಎಕ್ಸ್‌ಬಿಬಿ ರೂಪಾಂತರವು ಬಿಎ.2.75 ಗಿಂತಲೂ ಹೆಚ್ಚು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವ ಗುಣವನ್ನು ಹೊಂದಿದೆ ಎಂದು ಅದು ಹೇಳಿದೆ.
ಅಕ್ಟೋಬರ್ 3 ಮತ್ತು 9ರ ನಡುವಿನ ಅವಧಿಗೆ ಹೋಲಿಸಿದರೆ, ಅಕ್ಟೋಬರ್ 10 ಮತ್ತು 16 ರ ನಡುವೆ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಶೇಕಡ 17.7ರಷ್ಟು ಏರಿಕೆಯಾಗಿದೆ ಎಂದು ಸೋಮವಾರದ ಆರೋಗ್ಯ ಬುಲೆಟಿನ್ ತಿಳಿಸಿದೆ. ವಿಶೇಷವಾಗಿ ಜನಸಂದಣಿ ಹೆಚ್ಚಿರುವ ಜಿಲ್ಲೆಗಳಾದ ಥಾಣೆ, ರಾಯಗಡ ಮತ್ತು ಮುಂಬೈನಲ್ಲಿ ಈ ಏರಿಕೆ ಕಂಡುಬಂದಿದೆ ಎಂದು ಅದು ಹೇಳಿದೆ.
ಕೆಲವು ತಜ್ಞರು ಮುಂಬರುವ ಚಳಿಗಾಲದಲ್ಲಿ ವಿಶೇಷವಾಗಿ ಹಬ್ಬದ ಋತುವಿನಲ್ಲಿ ಏರಿಕೆಯನ್ನು ಅಂದಾಜಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ವರದಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸದಂತೆ ಆರೋಗ್ಯ ಇಲಾಖೆ ಜನರಿಗೆ ಸೂಚಿಸಿದೆ. ಆದಷ್ಟು ಬೇಗ, ವೈದ್ಯಕೀಯ ಸಲಹೆಯನ್ನು ಪಡೆಯಿರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದೆ. ಅಲ್ಲದೆ, ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯುವಂತೆಯೂ ಮನವಿ ಮಾಡಿದೆ.
ಕೊಮೊರ್ಬಿಡಿಟಿ ಹೊಂದಿರುವ ಜನರು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಾಗ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.