ನವದೆಹಲಿ: ಕಾಂಗ್ರೆಸ್‌ನ ಕೆಲವು ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಮುಕ್ತ ಮತ್ತು ನ್ಯಾಯೋಚಿತ ಸ್ಪರ್ಧೆಗೆ ತೊಡಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ.
ನಾನು ಕೆಲ ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ನಾಯಕರು ನನ್ನ ಜೊತೆಗಿನ ಸಭೆಗೆ ಲಭ್ಯವಿರಲಿಲ್ಲ. ಆದರೆ, ಖರ್ಗೆ ಅವರು ಭೇಟಿ ನೀಡಿದಾಗ ಅವರಿಗೆ ಸ್ವಾಗತ ಕೋರಿದ್ದಾರೆ ಎಂದು ತರೂರ್ ಆರೋಪಿಸಿದರು.
ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ(ಡಿಪಿಸಿಸಿ) ಸದಸ್ಯರ ಬಳಿ ಮತಯಾಚನೆ ಮಾಡಿದ ಸಂದರ್ಭ ಮಾತನಾಡಿದ ಅವರು, ಪಕ್ಷದ ಸಂಘಟನೆಯಲ್ಲಿ ಬದಲಾವಣೆ ತರಲು ಬಯಸುತ್ತಿದ್ದೇನೆ ಎಂದು ಹೇಳಿದರು.
2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದ ಮತದಾರರನ್ನು ಮತ್ತೆ ಕರೆತರುವ ಗುರಿ ಹೊಂದಿದ್ದೇನೆ ಎಂದರು. 'ಪಕ್ಷದಲ್ಲಿ ಬದಲಾವಣೆ ತರಲು ಇಚ್ಛಿಸುತ್ತಿದ್ದೇನೆ. 2014 ಮತ್ತು 2019ರಲ್ಲಿ ಪಕ್ಷದ ಪರ ನಿಲ್ಲದ ಮತದಾರರನ್ನು ವಾಪಸ್ ಕರೆತರಲು ಬಯಸಿದ್ದೇನೆ'ಎಂದು ಹೇಳಿದರು. ನನಗೆ ನೀಡಿರುವ ಪ್ರದೇಶ ಕಾಂಗ್ರೆಸ್ ಸಮಿತಿಗಳ ಸದಸ್ಯರ ಪಟ್ಟಿಯಲ್ಲಿ ಕೆಲ ಸಂಪರ್ಕ ಮಾಹಿತಿ ಬಿಟ್ಟುಹೋಗಿರುವುದರಿಂದ ಕೆಲವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಈ ಲೋಪಕ್ಕಾಗಿ ನಾನು ಯಾರನ್ನೂ ಟೀಕಿಸುವುದಿಲ್ಲ. ಕಳೆದ 22 ವರ್ಷಗಳಲ್ಲಿ ಪಕ್ಷದ ಅಧ್ಯಕ್ಷೀಯ ಚುನಾವಣೆ ನಡೆದಿಲ್ಲ ಎಂದು ಹೇಳಿದರು.'ವ್ಯವಸ್ಥೆಯಲ್ಲಿ ಲೋಪವಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. 22 ವರ್ಷಗಳಿಂದ ಪಕ್ಷದ ಅಧ್ಯಕ್ಷೀಯ ಚುನಾವಣೆ ನಡೆಯದಿರುವುದೇ ಇದಕ್ಕೆ ಕಾರಣ'ಎಂದು ಹೇಳಿದರು.
ಅಧ್ಯಕ್ಷೀಯ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುವ ವಿಶ್ವಾಸವಿದೆ. ಖರ್ಗೆ ಅವರ ಬಗ್ಗೆ ಶತ್ರುತ್ವ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.