ತಿರುವನಂತಪುರ : ಐದು ವರ್ಷಗಳ ಹಿಂದೆ ತನಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದಾಗ ಫೋರ್ಸೆಪ್ಸ್ (ವೈದ್ಯರು ಬಳಸುವ ಇಕ್ಕಳ) ಅನ್ನು ತನ್ನ ಹೊಟ್ಟೆಯಲ್ಲೇ ಬಿಟ್ಟಿದ್ದಕ್ಕಾಗಿ ವೈದ್ಯರ ವಿರುದ್ಧ ಹರ್ಷಿನಾ ಎಂಬ ಮಹಿಳೆ ಕೋಝಿಕೋಡ್‌ನಲ್ಲಿ ದೂರು ದಾಖಲಿಸಿದ ಬಳಿಕ ಈ ಬಗ್ಗೆ ತನಿಖೆಗೆ ಆದೇಶಿಸಿರುವ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು,ಶೀಘ್ರ ವರದಿಯನ್ನು ಸಲ್ಲಿಸುವಂತೆ ಆರೋಗ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಈ ಯಡವಟ್ಟಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಜಾರ್ಜ್ ತಿಳಿಸಿದ್ದಾರೆ.ನವಂಬರ್ 2017ರಲ್ಲಿ ಹರ್ಷಿನಾ ಕೋಝಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೂರನೇ ಬಾರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೊದಲಿನ ಎರಡು ಸಿಸೇರಿಯನ್ ಶಸ್ತ್ರಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿದ್ದವು.
ಮೂರನೇ ಸಿಸೇರಿಯನ್ ಬಳಿಕ ತೀವ್ರ ನೋವುಂಟಾಗುತ್ತಿತ್ತು. ಮೂತ್ರಪಿಂಡ ಕಲ್ಲುಗಳು ಅಥವಾ ಕ್ಯಾನ್ಸರ್ ಆಗಿರಬಹುದು ಎಂದು ತಾನು ಭಾವಿಸಿದ್ದೆ. ಪ್ರಬಲ ಆಯಂಟಿಬಯಾಟಿಕ್‌ಗಳ ಸೇವನೆಯಿಂದ ನೋವು ಕಡಿಮೆಯಾಗಿದ್ದರೂ ಕಳೆದ ಆರು ತಿಂಗಳುಗಳಿಂದ ಮೂತ್ರ ಸೋಂಕಿನಿಂದ ಬಳಲುತ್ತಿದ್ದರಿಂದ ನೋವು ಸಹಿಸಲಸಾಧ್ಯವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕಾನ್ ಮಾಡಿಸಿದಾಗ ಹೊಟ್ಟೆಯಲ್ಲಿ ಲೋಹದ ವಸ್ತುವಿದ್ದುದು ಮತ್ತು ಅದು ಮೂತ್ರಕೋಶಕ್ಕೆ ನುಗ್ಗಿ ಸೋಂಕನ್ನುಂಟು ಮಾಡಿದ್ದು ಪತ್ತೆಯಾಗಿತ್ತು.
ಕೋಝಿಕೋಡ್ ಮೆಡಿಕಲ್ ಆಸ್ಪತ್ರೆಗೆ ಭೇಟಿ ನೀಡಿದ್ದು,ಕೊನೆಗೂ ಸೆ.17ರಂದು ವೈದ್ಯರು ತನ್ನ ಹೊಟ್ಟೆಯಲ್ಲಿದ್ದ ಫೋರ್ಸೆಪ್ಸ್ ಹೊರಕ್ಕೆ ತೆಗೆದಿದ್ದಾರೆ ಎಂದು ಹರ್ಷಿನಾ ದೂರಿನಲ್ಲಿ ತಿಳಿಸಿದ್ದಾರೆ.'ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಕೂಡ ಈ ಬಗ್ಗೆ ವಿಚಾರಣೆಗೆ ಆದೇಶಿಸಿದೆ.ಈ ಬಗ್ಗೆ ತಾವು ಪ್ರಾಥಮಿಕ ತನಿಖೆಯನ್ನು ನಡೆಸಿದ್ದು,ಯಾವುದೇ ಶಸ್ತ್ರಚಿಕಿತ್ಸಾ ಉಪಕರಣ ನಾಪತ್ತೆಯಾಗಿರಲಿಲ್ಲ ಎನ್ನುವುದು ಕಂಡು ಬಂದಿದೆ ಎಂದು ಹೇಳಿರುವ ಕಾಲೇಜಿನ ಪ್ರಾಂಶುಪಾಲ ಡಾ.ಇ.ವಿ.ಗೋಪಿ ಅವರು,ಮಹಿಳೆ ಮೊದಲು ಎರಡು ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು ಎಂದು ಬೆಟ್ಟು ಮಾಡಿದ್ದಾರೆ.