ನವ ದೆಹಲಿ: ಬದುಕು ಸಾಗಿಸಲು ಕಷ್ಟ ಪಟ್ಟು ದುಡಿಯಬೇಕಾಗುತ್ತದೆ. ಕೆಲವರ ಬದುಕಿನಲ್ಲಿ ನಿತ್ಯ ದುಡಿಯದೇ ಇದ್ದರೆ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಿರುವಾಗ ಎಂತಹ ಕಷ್ಟ ಎದುರಾದರೂ ದುಡಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ.ಈ ಸಮಯದಲ್ಲಿ ಬೇಕಾಗಿರುವುದು ಛಲ.
ದೃಢ ಸಂಕಲ್ಪವೊಂದಿದ್ದರೆ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಎಷ್ಟೇ ಕಷ್ಟವಾದರೂ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಉದಾಹರಣೆಯೆಂಬಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಮಾರು ಹೋಗಿದ್ದಾರೆ.
ಈ ವಿಡಿಯೋದಲ್ಲಿ ಆಟೋ ರಿಕ್ಷಾ ಡ್ರೈವರ್ ಕಷ್ಟು ಪಟ್ಟು ರಿಕ್ಷಾ ಓಡಿಸುತ್ತಿದ್ದಾರೆ. ತನ್ನ ಎಡದ ಕಾಲಿಗೆ ಸಂಪೂರ್ಣವಾಗಿ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ. ಕಾಲನ್ನು ಸ್ವಲ್ಪವೂ ಮಡುಚಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತನ್ನ ಕಾಲನ್ನು ಹಗ್ಗದ ಸಹಾಯದಿಂದ ರಿಕ್ಷಾ ಮೇಲ್ಭಾಗಕ್ಕೆ ಕಟ್ಟಿಕೊಂಡಿದ್ದಾರೆ. ನಂತರ ಕಾಲನ್ನು ರಿಕ್ಷಾದ ಹೊರಭಾಗಕ್ಕೆ ಚಾಚಿಕೊಂಡು, ಕಷ್ಟದ ಪರಿಸ್ಥಿತಿಯಲ್ಲೂ ಛಲದಿಂದ ರಿಕ್ಷಾ ಚಾಲನೆ ಮಾಡುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಚಾಲಕನ ಧೈರ್ಯ ಹಾಗೂ ಸಾಹಸವನ್ನು ಕೊಂಡಾಡುತ್ತಿದ್ದಾರೆ.